ದ.ಕ ಜಿಲ್ಲಾ ಕಾಂಗ್ರೆಸ್: ಮನೆಯೊಂದು ಮೂರು ಬಾಗಿಲು

ಕರಾವಳಿ

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸಿನ ಕೆಲವು ತುಂಡು ಮುಖಂಡರೇ ಕಂಟಕ.!

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಕೇಂದ್ರ ಸ್ಥಾನ ಮಂಗಳೂರಿನಲ್ಲಿದೆ. ಮಂಗಳೂರಿನಲ್ಲಿರುವ ಮಲ್ಲಿಕಟ್ಟೆ ಕಾಂಗ್ರೆಸ್ ಭವನವೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಕೇಂದ್ರ ಸ್ಥಾನ. ಒಂದೊಮ್ಮೆ ಜಿಲ್ಲೆಯಲ್ಲಿ ಗತವೈಭವದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಈ ಪರಿಸ್ಥಿತಿಗೆ ಬಂದು ತಲುಪಲು ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ; ಕಾಂಗ್ರೆಸ್. ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರೇ ಶತ್ರುಗಳು. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಸಾಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡಿರುವ ಅಧ್ಯಕ್ಷರೇ ಇದಕ್ಕೆಲ್ಲ ಮುಖ್ಯ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಮೋಣೆಡ್ ಪಸೆದಾಂತಿನಾಯೆ’ ತುಳುವಿನಲ್ಲಿರುವ ಗಾದೆಮಾತಿನಂತೆ ಈ ಮನುಷ್ಯ ಅಧ್ಯಕ್ಷರಾದದ್ದೇ ತಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾತಾಳಕ್ಕೆ ಇಳಿದಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ. ಇಂತಹವರಿಂದ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಲು ಸಾಧ್ಯವಿಲ್ಲ. ಇಂತಹ ಸ್ವಾರ್ಥಿಗಳು ಪಕ್ಷವನ್ನು ಯಾರಾದರೂ ಕಷ್ಟಪಟ್ಟು ಅಧಿಕಾರಕ್ಕೆ ತಂದರೆ ಅಧಿಕಾರ ಅನುಭವಿಸಲು ಇಂತಹವರು ರೆಡಿಯಾಗುತ್ತಾರೆ. ಸ್ವಂತ ಪಕ್ಷದ ಕಾರ್ಯಕರ್ತರ ವಿರುದ್ಧವೇ ವಿರೋಧ ಪಕ್ಷದವರಿಗೆ ಸಹಾಯ ಮಾಡಿದ ಉಧಾಹರಣೆಗಳಿವೆ ಎಂದು ಕಾರ್ಯಕರ್ತರೆ ಅಳಲು ತೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ವಾಟ್ಸಾಪ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು ವೈರಲ್ ಆಗಿದೆ.

ಒಂದೆಡೆ ಜಿಲ್ಲಾ ಕಾಂಗ್ರೆಸ್ಸಿಗೆ ತಾವೇ ಗಾಡ್ ಫಾದರ್ ಗಳು ಎಂದು ಮೆರೆಯುತ್ತಿರುವ ಕೆಲವು ನಾಯಕರುಗಳಿಂದ ಯುವ ಕಾರ್ಯಕರ್ತರಿಗೆ ನಾಯಕತ್ವದ ಅವಕಾಶವೇ ಇಲ್ಲದಂತಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಭವನದೊಳಗೆ ನಡೆದ ಭಾರೀ ತಮ್ಮಣ ಇದಕ್ಕೊಂದು ಸ್ಪಷ್ಟ ನಿದರ್ಶನ.

ರಮಾನಾಥ ರೈ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದವರು. ಜಿಲ್ಲಾ ಅಧ್ಯಕ್ಷರಾಗಿದ್ದ ಸಂದರ್ಭ 8 ರಲ್ಲಿ 7 ಸ್ಥಾನ ಕಾಂಗ್ರೆಸ್ ಜಯಿಸಿತ್ತು. ಜಿಲ್ಲೆಯಲ್ಲಿ ನಿಗಮ ಮಂಡಳಿ ನೇಮಕಾತಿ, ಅಧಿಕಾರಿಗಳ ಬದಲಾವಣೆಯ ವಿಷಯದಲ್ಲಿ ಇದೀಗ ರೈ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಬೆದರು ಬೊಂಬೆ ಆಗಿ ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಸರಕಾರದ ಆಯಕಟ್ಟಿನ ಜಾಗದಲ್ಲಿ ಕೂತ ಒಂದಿಬ್ಬರು ಪ್ರಭಾವಿಗಳ ಕಾರ್ಬಾರು ನಡೆಯುತ್ತಿದೆಯಷ್ಟೇ.

ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಧೂಳೀಪಟವಾಗಿದೆ. ಕರಾವಳಿ, ಮಲೆನಾಡಿನಲ್ಲಿ ಲಗಾಡಿ ತೆಗೆದ ನಾಯಕರಿಗೆ ಹೈಕಮಾಂಡ್ ಮಣೆ ಹಾಕುತ್ತಿದೆ ಅನ್ನುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಆರೋಪ. ಈಗಿನ ಹಾಲಿ ಅಧ್ಯಕ್ಷ ತನ್ನ ವಾರ್ಡ್ ನಲ್ಲೇ ಕಾಂಗ್ರೆಸ್ ಗೆ ಲೀಡ್ ತಂದುಕೊಡಲು ಸಾಧ್ಯವಾಗಿಲ್ಲ. ಇನ್ನು ಜಿಲ್ಲಾ ಕಾಂಗ್ರೆಸ್ ಅನ್ನು ಎಷ್ಟರಮಟ್ಟಿಗೆ ಕಟ್ಟಬಹುದು. ಇನ್ನು ಪಕ್ಷಕ್ಕಾಗಿ ನಯಾಪೈಸೆಯ ಕೆಲಸ ಮಾಡದ, ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ವ್ಯವಹಾರಕ್ಕಿಳಿದ ನಾಯಕನಿಗೆ ಕಾರ್ಯಾಧ್ಯಕ್ಷ ಹುದ್ದೆ. ಮಲೆನಾಡಿನಲ್ಲಿ ಉಸಿರಾಡುತ್ತಿದ್ದ ಕಾಂಗ್ರೆಸ್ ಗೆ ಈ ವಯ್ಯಾ ಉಸ್ತುವಾರಿಯಾದುದೇ ತಡ, ಪಕ್ಷ ಉಸಿರಾಡುವುದನ್ನೇ ನಿಲ್ಲಿಸಿದೆ. ಇಂತಹವರಿಗೆ ವಿಧಾನಪರಿಷತ್ ಸ್ಥಾನಮಾನ ಕೂಡ ಬೇರೆ ಕೇಡು.

ಪಕ್ಷ ಎಕ್ಕುಟ್ಟಿ ಹೋದರೆ ಇವರಿಗೇನೂ ನಷ್ಟವಿಲ್ಲ. ಇವರಿಗೆ ಶಿಕ್ಷಣ ಉದ್ಯಮ, ವೈನ್ ಉದ್ಯಮ ಬೆಳೆದರಷ್ಟೇ ಸಾಕು. ಇಂತವರಿಂದ ಪಕ್ಷ ಸರ್ವನಾಶವಾಗದೇ ಇನ್ನೇನೂ ಆಗಲು ಸಾಧ್ಯ. ತಮಗೆ ಬೇಕಾದ ಹಾಗೆ ಕುಣಿಸುತ್ತಾ ಕಾಕಾ ರಾಜಕಾರಣಿಯೊಬ್ಬರು ತಮ್ಮ ವಿರೋಧಿಗಳನ್ನೆಲ್ಲ ಮೂಲೆ ಸೇರುವಂತೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಲಾಭ ಪಡೆದುಕೊಂಡವರು ಪಕ್ಷ ಕಟ್ಟದೆ ತಮ್ಮ ಬುಡ ಗಟ್ಟಿ ಮಾಡಿಕೊಂಡಿದ್ದಾರೆ. ಕೆಲವರು ತಮ್ಮ ವೈಮನಸ್ಸಿಗೆ ಸಾಮಾನ್ಯ ಕಾರ್ಯಕರ್ತರನ್ನು ತುಳಿಯುತ್ತಿದ್ದಾರೆ. ಇನ್ನು ಕೆಲವರು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಕೆಲವು ನಾಯಕರು ತೆಪ್ಪಗಿದ್ದಾರೆ. ಒಟ್ಟಾರೆ ಮನೆಯೊಂದು ಮೂರು ಬಾಗಿಲು ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ಸಿಗರೇ ಪ್ರಬಲವಾಗಿ ಸನ್ನದ್ಧರಾಗಿದ್ದಾರೆ.