ಹಾಡಹಗಲೇ ಮನೆಗೆ ನುಗ್ಗಿ ಎಂಟು ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ.

ಕರಾವಳಿ

ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆಯಲ್ಲಿ ಕಳ್ಳರ ಕೃತ್ಯ.

ಬಂಟ್ವಾಳ ತಾ.ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ ಎಂಬಲ್ಲಿನ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಇಂದು ಮಧ್ಯಾಹ್ನ ಕಳ್ಳತನ ನಡೆದಿದೆ. ಗಣೇಶ್ ಶೆಟ್ಟಿ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದು ಪತ್ನಿ ಮಧ್ಯಾಹ್ನ 12.45ರ ಸುಮಾರಿಗೆ ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿದ್ಜರು. 2ಗಂಟೆ ಸುಮಾರಿಗೆ ಪೇಟೆಯಿಂದ ಮರಳಿ ಬಂದ ಗಣೇಶ್ ಶೆಟ್ಟಿಯವರ ಪತ್ನಿ ಮುಂಬಾಗಿಲ ಬೀಗ ತೆಗೆದು ಒಳಗೆ ಹೋದಾಗ ಹಿಂಬಾಗಿಲು ಮುರಿದು ಕಳ್ಳತನ ನಡೆದಿರುವುದು ಕಂಡುಬಂದಿದೆ.

ಕಪಾಟಿನ ಬಾಗಿಲು ಮುರಿದ ಕಳ್ಳರು ಒಳಗಿನ ಪೆಟ್ಟಿಗೆಯಲ್ಲಿದ್ದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ. ತೊಂಬತ್ತಾರು ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳು, ಹಳೆಯ ಒಂದಿಷ್ಟು ಚಿನ್ನಾಭರಣ ಸೇರಿ ಒಟ್ಟು ಎಂಟು ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳರ ಕೃತ್ಯದಿಂದ ಕಷ್ಟಪಟ್ಟು ದುಡಿದು ಕೂಡಿಟ್ಟ ಚಿನ್ನಾಭರಣ ಕಳೆದುಕೊಂಡ ಮನೆಯೊಡತಿಯ ಕಣ್ಣೀರು ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಕೆಲ ಸಮಯಗಳಿಂದ ಕೊಳ್ನಾಡು, ವಿಟ್ಲ ಪಡ್ನೂರು ಗ್ರಾಮದ ಸೇರಿದಂತೆ ವಿಟ್ಲ ಠಾಣಾ ವ್ಯಾಪ್ತಿಯ ಅಲ್ಲಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಈವರೆಗೂ ಪತ್ತೆಯಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.