ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಸಮೀಪದ ದೇವಿನಗರ ನಿವಾಸಿ ಲೀಲಾ ನಾಯ್ಕ(45)ಮೃತ ದುರ್ದೈವಿ.
ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಗಲಾಟೆ ನಡೆಸುವುದು ಪತಿ ಸಂಜೀವ ನಾಯ್ಕನ ಚಟವಾಗಿತ್ತು. ಎಂದಿನಂತೆಯೇ ಬುಧವಾರದಂದು ಕೂಡಾ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಕಾಲು ಕೆರೆದು ಜಗಳವಾಡಿದ್ದಾನೆ.
ಜಗಳ ಮುಂದುವರಿದು ಪತ್ನಿ ಲೀಲಾಳ ಮೇಲೆ ಸಂಜೀವ ಮನಬಂದಂತೆ ಥಳಿಸಿ ಸಲಾಕೆಯ ಭರ್ಚಿಯಿಂದ ಹಲ್ಲೆ ಗೈದು ಪರಿಣಾಮ ಲೀಲಾ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಸ್ಥಳೀಯರು ಗಾಯಾಳುವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಎರಡು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಲೀಲಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮೃತದೇಹವನ್ನು ಮನೆಗೆ ತಂದ ಪತಿ ಆಕೆಯ ರಕ್ತದಲ್ಲಿ ಮುಳುಗಿದ್ದ ಬಟ್ಟೆಬರೆಗಳನ್ನು ನಾಶಮಾಡಿದ್ದಲ್ಲದೇ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾಳೆಂದು ಸುದ್ದಿ ಹಬ್ಬಿಸಿದ್ದಾನೆ. ದಂಪತಿಯ ಏಕೈಕ ಪುತ್ರಿ ಕುಡುಕ ತಂದೆಯ ಕಿರುಕುಳ ತಾಳಲಾರದೇ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದಾಳೆ. ಸ್ಥಳೀಯರು ಮತ್ತು ಸಂಬಂಧಿಕರು ನೀಡಿದ ಮಾಹಿತಿಯಂತೆ ಪತಿ ಸಂಜೀವನನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಆ ಸಂದರ್ಭ ತಾನು ಎಸಗಿದ ರಾಕ್ಷಸೀ ಕೃತ್ಯವನ್ನು ಆರೋಪಿ ಪತಿ ಸಂಜೀವ ನಾಯ್ಕ ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾನೆ. ಇದೀಗ ಕೊಲೆ, ಸಾಕ್ಷ್ಯ ನಾಶ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿ ಸಂಜೀವ ನಾಯ್ಕನನ್ನು ಬಂಧಿಸಿದ್ದಾರೆ.