ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಜಾನಪದ ಕತೆಗಳ ಸಂಕಲನವೊಂದು ಇದೇ ಮೊದಲ ಬಾರಿಗೆ ಇಂಗ್ಲಿಷ್‌ಗೆ ಅನುವಾದಗೊಂಡಿವೆ.
ಕರಾವಳಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಬ್ಯಾರಿ ಮುಸ್ಲಿಂ ಜನಾಂಗಕ್ಕೆ ಸುಮಾರು 1400ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ಜನರು ಆಡುವ ಮಾತೃಭಾಷೆಯು ಬ್ಯಾರಿಯಾಗಿದೆ. ಈ ಭಾಷೆಯ ಅಭಿವೃದ್ಧಿಗಾಗಿ 2007ರಲ್ಲೇ ರಾಜ್ಯ ಸರಕಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. 2017ರಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಸ್ಥಾಪಿಸಿದೆ. ಇಂತಹ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಇತ್ಯಾದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈವರೆಗೆ ಬ್ಯಾರಿ, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಕತೆ, ಕಾದಂಬರಿ, ಲೇಖನ, ಚುಟುಕು, ಹನಿಗವನ, ನಾಟಕ, ಸಂಶೋಧನೆ ಹೀಗೆ 125 ಕೃತಿಗಳು ಪ್ರಕಟಗೊಂಡಿವೆ. ಆದರೆ ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಜಾನಪದ ಕತೆಗಳ ಸಂಕಲನವೊಂದು ಇದೇ ಮೊದಲ ಬಾರಿಗೆ ಇಂಗ್ಲಿಷ್‌ಗೆ ಅನುವಾದಗೊಂಡಿವೆ.

’The Fakir’s Daughter and other Beary Folktales’ ನಾಡಿನ ಬೇರೆ ಬೇರೆ ಲೇಖಕ-ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ ಜಾನಪದ ಕತೆಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಪತ್ರಕರ್ತ ಹಂಝ ಮಲಾರ್ ಸುಮಾರು 30 ಬ್ಯಾರಿ ಜಾನಪದ ಕತೆಗಳನ್ನು ಸಂಗ್ರಹಿಸಿದ್ದರು. ಅದರಂತೆ 2016ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಬಿ.ಎ.ಮುಹಮ್ಮದ್ ಹನೀಫ್ ಈ ಕತೆಗಳ ಸಂಕಲನ ಚನ್ನನವನ್ನು ಪ್ರಕಟಿಸಿದ್ದರು. ಎರಡು ವರ್ಷದ ಹಿಂದೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಸಿಲ್ವಿಯಾ ರೇಗೋ ಈ ಜಾನಪದ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಮುಂದಾದರು. ಅದರಂತೆ ಈ ಕೃತಿಯನ್ನು ಹೊಸದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿತ್ತು. ಈ ಸಂದರ್ಭ ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ರೊ.ಫ್ಲೋರಾ ಕ್ಯಾಸ್ಟಲಿನೊ ಮತ್ತು ರೇಡಿಯೋ ಸಾರಂಗ್‌ನ ಕಾರ್ಯಕ್ರಮ ನಿರ್ವಾಹಕ ಸೈಫ್ ಕುತ್ತಾರ್ ಅವರ ಸಹಕಾರ ಮರೆಯಲಾಗದ್ದು. ಡಾ. ಸಿಲ್ವಿಯಾ ರೇಗೋ ಬ್ಯಾರಿಗಳ ಮಧ್ಯೆ ಬೆಳೆದವರು. ಪ್ರೊ. ಫ್ಲೋರಾ ಕ್ಯಾಸ್ಟಲಿನೋ ಅವರಿಗೆ ಬ್ಯಾರಿ ಭಾಷೆಯ ಮೇಲೆ ಅಪಾರ ಪ್ರೀತಿ ಇದೆ. ಸೈಫ್ ಕುತ್ತಾರ್ ಬ್ಯಾರಿ ಭಾಷಿಗ. ಇಬ್ಬರೂ ಕೂಡ ಅನುವಾದಕಿ ಡಾ. ಸಿಲ್ವಿಯಾ ರೇಗೋ ಅವರಿಗೆ ಅನುವಾದದ ಆರಂಭದಿಂದ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಅಡ್ಮಿನ್ ಬ್ಲಾಕ್‌ನ ಸಭಾಂಗಣದಲ್ಲಿ ಬುಧವಾರ ಈ ಕೃತಿಯನ್ನು ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಉಪಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಭಾಷೆ ಮತ್ತು ಸಾಂಸ್ಕ್ರತಿಕ ಅಧ್ಯಯನ ನಿಕಾಯವು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸಂಸ್ಕೃತಿ ನೆಲೆನಿಲ್ಲಲು ಇಂತಹ ವೌಲಿಕ ಕೃತಿಗಳ ಪ್ರಕಟನೆಯ ಅಗತ್ಯವೂ ಇದೆ. ಇವುಗಳನ್ನು ಓದುವ ಮೂಲಕ ಸಂಸ್ಕೃತಿ – ಬದುಕಿನ ಬಗ್ಗೆ ಅರಿಯಲು ಸಾಧ್ಯವಿದೆ ಎಂದರು.
ಕೃತಿಯ ಸಂಪಾದಕ, ಪತ್ರಕರ್ತ ಹಂಝ ಮಲಾರ್ ಮಾತನಾಡಿ ಅನುವಾದಕಿ ಡಾ.ಸಿಲ್ವಿಯಾ ರೇಗೋ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಹಿರಿಯ ಸಂಶೋಧಕ ರೆ.ಡಾ.ವಿಲ್ಲಿ ಡಿಸಿಲ್ವ, ಕೃತಿಯ ಅನುವಾದಕಿ, ಡಾ.ಸಿಲ್ವಿಯಾ ರೇಗೋ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳನ್ನು ಡಾ.ಝೀಟ ಲೋಬೊ ಪರಿಚಯಿಸಿದರು. ಪ್ರೊ. ಫ್ಲೋರಾ ಕ್ಯಾಸ್ಟಲಿನೋ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಜೊಕ್ಕಿಂ ಪಿಂಟೊ ವಂದಿಸಿದರು. ರೇಡಿಯೋ ಸಾರಂಗ್‌ನ ಕಾರ್ಯಕ್ರಮ ನಿರ್ವಾಹಕ ಸೈಫ್ ಕುತ್ತಾರ್ ಸಹಕರಿಸಿದರು. ಪ್ರಾಧ್ಯಾಪಕ ಸ್ಯಾಮುವೆಲ್ ಪೀಟರ್ಸ್ ಕಾರ್ಯಕ್ರಮ ನಿರೂಪಿಸಿದರು.
