ಮಂಜನಾಡಿಯಲ್ಲಿ ಇಬ್ಬರು ಮಕ್ಕಳು ಮತ್ತು ಎರಡು ಕಾಲುಗಳನ್ನು ಕಳೆದುಕೊಂಡು ಅಸಹಾಯಕಳಾಗಿರುವ ತಾಯಿ ಅಶ್ವಿನಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ನವೆಂಬರ್ 17 ರ ಒಳಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅಸಹಾಯಕಳಾಗಿರುವ ತಾಯಿ ಅಶ್ವಿನಿ ಅವರು ಸರಕಾರದ ಪ್ರಧಾನ ಕಾರ್ಯದರ್ಶಿಗೆ ನೀಡಿರುವ ದೂರಿನಲ್ಲಿ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ 30 ರಂದು ನಡೆದ ಗ್ರಾಮದ ಅವೈಜ್ಞಾನಿಕ ರಸ್ತೆ ಕಾಮಗಾರಿ ಸಂದರ್ಭ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಗುಡ್ಡ ಕಡಿಯಲಾಗಿತ್ತು. ಪಂಚಾಯಿತಿ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಅತ್ತೆ ಸೇರಿದಂತೆ ಮೂವರು ಮೃತಪಟ್ಟಿದ್ದರು.

ನನ್ನ ಎರಡೂ ಕಾಲುಗಳನ್ನು ಕತ್ತರಿಸಲಾಗಿದೆ. ಮಾವನ ಒಂದು ಕಾಲು ತುಂಡಾಗಿ ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದೇವೆ. ಆದರೆ ಈ ಘಟನೆಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದು ದೂರು ಸಲ್ಲಿಸಿದ್ದರು.
ಮಾನವ ಹಕ್ಕುಗಳ ಆಯೋಗಕ್ಕೂ ಎರಡನೇ ಬಾರಿ ದೂರು ಸಲ್ಲಿಸಲಾಗಿತ್ತು. ಅದರಂತೆ ಮತ್ತೊಮ್ಮೆ ಸ್ಪಂದಿಸಿರುವ ಆಯೋಗ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದೆ.
