ಪೊಲೀಸ್ ಇಲಾಖೆ ವರದಿ ನೀಡಿದರೂ ಮಹಾನಗರ ಪಾಲಿಕೆ ಜಾಣ ಮೌನಕ್ಕೆ ಜಾರಿದೆ.!
ಮಂಗಳೂರಿನಲ್ಲಿ ಕೇವಲ ಕೋಮುಗಲಭೆಯಲ್ಲಿ ಮಾತ್ರ ಜೀವ ಹೋಗೋದಲ್ಲ. ಅಲ್ಲಲ್ಲಿ ರಸ್ತೆಯ ಅಪಘಾತಕ್ಕೂ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆಯಿಂದ ವ್ಯಕ್ತಿ ಈಗಲೂ ಹೊರಗೆ ಹೋದರೆ ಅದೇ ಪ್ರಾರ್ಥನೆ ‘ಮರಳಿ ಸುರಕ್ಷಿತವಾಗಿ ಬರಲಿ’ ಎಂದು.
ಮಂಗಳೂರು ನಗರಕ್ಕೆ ಸಿಲಿಕಾನ್ ಹಬ್, ಐಟಿ ಬಿಟಿ ಗಳು ಬರಲಿದೆ ಅನ್ನುವ ಸುದ್ದಿಗಳು ಇವೆ. ಇದಕ್ಕೆ ಶಂಕುಸ್ಥಾಪನೆಗಳನ್ನು ಕೂಡ ರಾಜ್ಯ ಸರಕಾರ ನೆರವೇರಿಸಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಮತೀಯ ಶಕ್ತಿಗಳ ಅಟ್ಟಹಾಸ ಕಡಿಮೆ ಆಗಿರುವುದರಿಂದ ನಗರದತ್ತ ಐಟಿ ಬಿಟಿ ಕಂಪನಿಗಳು ದಾಪುಗಾಲು ಇಡಲು ಸಿದ್ಧವಾಗಿದೆ ಅನ್ನುವ ವರದಿಗಳು ಬರುತ್ತಿವೆ. ಆದರೆ ಮಂಗಳೂರು ನಗರದ ರಸ್ತೆಗಳು ವಾಹನ ಸಂಚಾರಕ್ಕೆ ಎಷ್ಟು ಸುರಕ್ಷಿತ ಅನ್ನುವುದು ಮಾತ್ರ ಇನ್ನು ಕೂಡ ಮಿಲಿಯನ್ ಡಾಲರ್ ಪ್ರಶ್ನೆ.

ಮಂಗಳೂರು ನಗರದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆಗಳು ನಿರ್ಮಾಣಗೊಂಡಿದೆ. ಸ್ಮಾರ್ಟ್ ಸಿಟಿ ರಸ್ತೆಗಳು ಬಂದಿದೆ. ಗ್ರಾಮಾಂತರ ರಸ್ತೆಗಳ ವಿಷಯ ಬಿಡಿ. ನಗರ ಪ್ರದೇಶದ ರಸ್ತೆಗಳು ಎಷ್ಟು ಸುರಕ್ಷಿತವಾಗಿದೆ. ಯಾವುದಾದರೂ ಅಪಘಾತ ಪ್ರಕರಣ ನಡೆದರೆ ವಾಹನ ಚಾಲಕನ ನಿರ್ಲಕ್ಷ್ಯ ಎಂದು ಷರಾ ಬರೆದು ಬಿಡುತ್ತೇವೆ. ವಾಹನ ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಅಪಘಾತಗಳು ಸಂಭವಿಸುವುದು ಒಂದು ಕಡೆಯಾದರೆ, ರಸ್ತೆ ಕಾಮಗಾರಿ ನಿರ್ವಹಣೆಯ ಎಡವಟ್ಟಿನಿಂದಾಗಿ ಹಲವು ಪ್ರಾಣಗಳು ಬಲಿಯಾಗಿರುವುದು ವ್ಯವಸ್ಥೆಯ ನಿರ್ಲಕ್ಷ್ಯದ ಪರಮಾವಧಿ ಅಲ್ಲವೇ.? ಮಂಗಳೂರು ನಗರದ ಹಂಪನಕಟ್ಟೆ, ಕಂಕನಾಡಿ, ಲಾಲ್ ಬಾಗ್, ಕೊಟ್ಟಾರ, ಪಿವಿಎಸ್ ಮೊದಲಾದ ಕಡೆ ಕಾಂಕ್ರೀಟ್ ಕಾಮಗಾರಿ ನಿರ್ವಹಣೆಯನ್ನು ಒಮ್ಮೆ ನೋಡಿಕೊಂಡು ಬನ್ನಿ.
ಕಣ್ಣಿಗೆ ಕಾಣುವಂತೆ ಸುಂದರವಾಗಿ ಕಾಂಕ್ರೀಟ್ ರಸ್ತೆ ಮಾಡಿರಬಹುದು. ಆದರೆ ಅಲ್ಲಿ ನಡೆದಿರುವ ಕೆಲವು ಅವ್ಯವಸ್ಥೆಗಳು ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ವರದಿಯನ್ನು ಪೊಲೀಸ್ ಇಲಾಖೆ ಸಂಬಂಧಪಟ್ಟ ಇಲಾಖೆಗೆ ನೀಡಿದರೂ ಈವರೆಗೂ ಕ್ರಮ ಕೈಗೊಳ್ಳದೆ ಇರುವುದು ಭಂಡತನ ಎನ್ನದೆ ಇನ್ನೇನು ಹೇಳಬೇಕು. ಕಾಂಕ್ರೀಟ್ ರಸ್ತೆಯ ಮಧ್ಯಭಾಗದಲ್ಲಿ ಹೋಲ್ (ಗುಂಡಿ) ತೆಗೆದು ಮುಚ್ಚಲಾಗಿದೆ. ಆ ಗುಂಡಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬಾಯಿ ತೆರೆದು ನಿಂತಿದೆ ಮಾತ್ರವಲ್ಲ ರಸ್ತೆಯ ಸಮತಟ್ಟುಗಿಂತ ಕೆಳಕ್ಕೆ ಜಾರಿದೆ. ಇನ್ನು ಕಾಂಕ್ರೀಟ್ ರಸ್ತೆ ನಿರ್ಮಿಸುವಾಗ ಮಧ್ಯಭಾಗದಲ್ಲಿ ಕೆಲವು ಜಾಗಕ್ಕೆ ಹೊಯ್ಗೆ ಹಾಕಿ ಹಾಗೆಯೇ ಬಿಡಲಾಗುತ್ತದೆ. ಬಿಸಿಲಿನ ತಾಪಕ್ಕೆ ಕಾಂಕ್ರೀಟ್ ರಸ್ತೆ ಕೂಡುವಿಕೆ ಆಗುವುದರಿಂದ ಇದನ್ನು ಹಾಗೆಯೇ ನಿರ್ಮಿಸಲಾಗುತ್ತದೆ. ಆದರೆ ರಸ್ತೆ ಕಾಮಗಾರಿ ಮಾಡುವವರಿಗೆ ಸಮರ್ಪಕವಾಗಿ ಇದರ ಅರಿವು ಇಲ್ಲದೇ ಇರುವುದರಿಂದ ಬೇಕಾಬಿಟ್ಟಿಯಾಗಿ ಕೂಡುವಿಕೆ ಜಾಗ ಬಿಡುವುದರಿಂದ ಅದು ದೊಡ್ಡ ತೋಡಿನ ರೀತಿಯಲ್ಲಿ ಸೆಳೆ ಬಿಡುತ್ತಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಕಂಟಕ. ಸ್ವಲ್ಪ ಆಯತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಇದರಿಂದಾಗಿಯೇ ಹಲವಾರು ಕಡೆ ರಸ್ತೆ ಅಪಘಾತಗಳು ನಡೆದು ಪ್ರಾಣ ಹಾರಿ ಹೋಗಿದ್ದು ಇದೆ.

ಮಹಾನಗರ ಪಾಲಿಕೆಗೆ ವರದಿ ನೀಡಿರುವ ಪೊಲೀಸ್ ಇಲಾಖೆ
ಮಂಗಳೂರು ನಗರದಲ್ಲಿ ರಸ್ತೆ ನಿರ್ವಹಣೆಯ ಸಮರ್ಪಕತೆಯ ಕೊರತೆಯಿಂದಾಗಿ ಬಹುಪಾಲು ರಸ್ತೆ ಅಪಘಾತಗಳು ನಡೆಯುತ್ತಿದೆ ಎಂಬ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವರದಿಯನ್ನು ಮಹಾನಗರ ಪಾಲಿಕೆಗೆ ಸಲ್ಲಿಸಿದೆ. ರಸ್ತೆ ಅಪಘಾತಕ್ಕೆ ಕಾರಣವಾಗುವ ಅಂಶಗಳನ್ನು ಉಲ್ಲೇಖಿಸಿದೆ. ಆದರೆ ಪೊಲೀಸ್ ಇಲಾಖೆಯ ವರದಿಯನ್ನೇ ಮಹಾನಗರ ಪಾಲಿಕೆ ಕಸದ ಬುಟ್ಟಿಗೆ ಎಸೆದಿದೆ. ವರದಿ ನೀಡಿ ವರ್ಷಗಳೇ ಕಳೆದರೂ ಮಹಾನಗರ ಪಾಲಿಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಪೊಲೀಸ್ ಇಲಾಖೆಯ ವರದಿಗೆ ಎಚ್ಚೆತ್ತುಕೊಳ್ಳದ ಮಹಾನಗರ ಪಾಲಿಕೆ ಇನ್ನು ಜನಸಾಮಾನ್ಯರ ಸಮಸ್ಯೆಗೆ ಯಾವ ರೀತಿ ಸ್ಪಂದಿಸಬಹುದು ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಮಂಗಳೂರು ನಗರದಲ್ಲಿ ನಡೆಯುತ್ತಿರುವ ಪ್ರತಿಯೊಂದು ರಸ್ತೆ ಅಪಘಾತಗಳ ಹಿಂದೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ಪಾಲು ಇದೆ ಅನ್ನುವುದು ಅಷ್ಟೇ ಸತ್ಯ.
