ಘನತಾಜ್ಯ ನಿರ್ವಹಣೆ: ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ರೂಪಿಸುವಂತೆ ಡಾ. ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಮನವಿ

ರಾಜ್ಯ

ಘನತಾಜ್ಯ ನಿರ್ವಹಣೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ರೂಪಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ವಿಧಾನ ಸೌಧದಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿ, ಅಧಿಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ರಾಜ್ಯವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಕೊಂಡೊಯ್ಯಬೇಕು. ಈಗಾಗಲೇ ಸುಮಾರು 4,000 ಗ್ರಾ. ಪಂಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ‘ಸ್ವಚ್ಛತಾ ವಾಹಿನಿ’ಗಳನ್ನಾಗಿ ಯಶಸ್ವಿಯಾಗಿ ನಿಯೋಜಿಸಲಾಗಿದೆ. ಇದನ್ನು ರಾಜ್ಯದ ಎಲ್ಲ 6,000 ಗ್ರಾಪಂಗಳಿಗೂ ವಿಸ್ತರಿಸಿ, ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಬಗ್ಗೆ ಸೂಕ್ತ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಗೋಶಾಲೆಯಂತಹ ಸ್ಥಳಗಳಲ್ಲಿ ಹಸಿ ಕಸ ಸಮರ್ಪಕವಾಗಿ ನಿರ್ವಹಿಸಬೇಕು. ದ್ರವ ತ್ಯಾಜ್ಯದ ನಿರ್ವಹಣೆಗಾಗಿ ಒಳಚರಂಡಿ ನೀರಿನ ಮರುಬಳಕೆ ನೀತಿ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸೂಕ್ತ ತರಬೇತಿ ಮತ್ತು ತಂತ್ರಜ್ಞಾನ ಒದಗಿಸಬೇಕು. ಕೈಗಾರಿಕೆಗಳಲ್ಲಿ ಸಂಸ್ಕರಿಸಿದ ನೀರನ್ನು ಮಾತ್ರ ಬಳಸುವಂತೆ ನಿಯಮ ರೂಪಿಸಿ, ಕುಡಿಯುವ ನೀರನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರಾದ ಫೌಜಿಯಾ ತರನ್ನುಮ್, ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಪ್ರಕಾರ, ಪ್ರತಿಯೊಂದು ಗ್ರಾಪಂನಲ್ಲಿ ಸಮರ್ಪಕ ನಿರ್ವಹಣಾ ನಿಯಮ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ, ಪಂಚಾಯತ್ ರಾಜ್ ಕಾರ್ಯದರ್ಶಿ ರಂದೀಪ್ ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಒಟ್ಟು 7,312 ತ್ಯಾಜ್ಯ ಸಂಗ್ರಹಣಾ ವಾಹನಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 16,992 ಗ್ರಾಮಗಳಲ್ಲಿ ಒಣ ಕಸ ಸಂಗ್ರಹಣೆಗಾಗಿ ವ್ಯವಸ್ಥಿತ ಕ್ರಮ ಕೈಗೊಳ್ಳಲಾಗಿದೆ. ಗ್ರಾಪಂ ಮಟ್ಟದಲ್ಲಿ ಒಟ್ಟು 5,501 ಸ್ವಚ್ಛ ವಾಹಿನಿಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಪ್ರತಿವರ್ಷ 4,252 ಟಿಪಿಡಿ (ಟನ್ ಪ್ರತಿ ದಿನ) ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು.