ಶಿರ್ವ: ಪಾಪನಾಶಿನಿ ಹೊಳೆಯಲ್ಲಿ ದನದ ರುಂಡ ಪತ್ತೆ ಪ್ರಕರಣ: ಶಿರ್ವಪದವು ನಿವಾಸಿ ಅಶೋಕ ಎಂಬಾತನ ಬಂಧನ

ಕರಾವಳಿ

ಕಾಪು ಪ್ರದೇಶದ ಶಿರ್ವ ಕಲ್ಲೊಟ್ಟು ಸೇತುವೆ ಕೆಳಗಿನ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳನ್ನು ಎಸೆದ ಪ್ರಕರಣವನ್ನು ಭೇದಿಸಿದ ಶಿರ್ವ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಿರ್ವಪದವು ಬಬ್ಬಬಸ್ವಾಮಿ ದೇವಸ್ಥಾನದ ಬಳಿ ನಿವಾಸಿ ಆಶೋಕ ಎಂಬಾತನನ್ನು ಬಂಧಿಸುವಲ್ಲಿ ಶಿರ್ವ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೂನ್ ಒಂದರಂದು ಪಾಪನಾಶಿಸಿ ಹೊಳೆಯಲ್ಲಿ ಜಾನುವಾರಿನ ರುಂಡ ಸಹಿತ ಕೆಲವು ಅವಶೇಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ ಅವರು ಕಾಪು ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದರು.

ಈ ವೇಳೆ ಜಾನುವಾರದ ಮೇಲ್ದವಡೆಯ ಭಾಗ, ಎರಡು ಗೆರಸುಗಳು, ಮಾಂಸ ಹಾಗೂ ಹೊಟ್ಟೆಯ ಒಳಭಾಗಗಳನ್ನು ವಶಪಡಿಸಿಕೊಂಡು, ಕರ್ನಾಟಕ ಜಾನುವಾರು ವಧೆ ತಡೆ ಹಾಗೂ ಸಂರಕ್ಷಣಾ ಕಾಯ್ದೆ-2020ರ ಕಲಂ 4 ಮತ್ತು 12ರಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಪೊಲೀಸರು ಶಿರ್ವ ಪದವು ನಿವಾಸಿ ಅಶೋಕ (52) ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾರಾಟ ನಡೆಸಿ, ಉಳಿದ ಅವಶೇಷಗಳನ್ನು ಹೊಳೆಗೆ ಎಸೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತನ ವಶದಲ್ಲಿದ್ದ ಜಾನುವಾರಿನ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಂಡು, ಪ್ರಕರಣದ ಆರೋಪಿ ಆಶೋಕ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾರ್ಕಳ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತದ ವೃತ್ತ ನಿರೀಕ್ಷಕ ಅಝಮತ್ ಅಲಿ ಅವರ ನೇತ್ರತ್ವದಲ್ಲಿ ಪಿಎಸ್‌ಐ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್., ಸಿಬ್ಬಂದಿಗಳಾದ ಮಂಜುನಾಥ ಅಡಿಗ, ಕಿರಣ್, ಯಲ್ಲಾಲಿಂಗ, ಕಾಪು ಪೊಲೀಸ್ ಠಾಣೆಯ ರಘು ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ರಹಿಮಾನ್ ಮತ್ತು ಸಂದೇಶ್ ರವರು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.