ಚುನಾವಣಾ ಆಯೋಗವು ಪೌರತ್ವವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯಲ್ಲ: ಸುಪ್ರೀಂ ಕೋರ್ಟ್

ರಾಷ್ಟ್ರೀಯ

ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ಚುನಾವಣಾ ಆಯೋಗಕ್ಕೆ ವಿಶೇಷ ಅಧಿಕಾರವಿದೆ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಹೆಗೆದುಹಾಕಿದ ಮಾತ್ರಕ್ಕೆ ವ್ಯಕ್ತಿಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಚುನಾವಣಾ ಆಯೋಗವು ಪೌರತ್ವವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ (SIR) ಸಂಬಂಧಿಸಿದಂತೆ ಶುಕ್ರವಾರ ನಡೆದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ಬಿಹಾರ SIR ಪ್ರಕರಣದಲ್ಲಿ ಈಗಾಗಲೇ ನೀಡಿರುವ ತೀರ್ಪನ್ನ ಉಲ್ಲೇಖಿಸಿದ ನ್ಯಾಯಾಲಯ, ಪೌರತ್ವವನ್ನ ನಿರ್ಧರಿಸುವ ಅಂತಿಮ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಪುನರುಚ್ಚರಿಸಿತು. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಮಾಡಿದ ಮಾತ್ರಕ್ಕೆ ಯಾರೂ ತಮ್ಮ ಭಾರತೀಯ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿತು.

ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ನಡೆಸುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಯಾರದ್ದಾದರೂ ಹೆಸರನ್ನು ಕೈಬಿಟ್ಟರೆ ಅಥವಾ ತೆಗೆದುಹಾಕಿದರೆ, ಅದೊಂದೇ ಕಾರಣಕ್ಕೆ ಅವರ ಪೌರತ್ವ ರದ್ದಾಗುವುದಿಲ್ಲ ಮತ್ತು ಅದು ಅವರ ಪೌರತ್ವವನ್ನು ನಿರ್ಧರಿಸುವ ಅಂತಿಮ ಮಾನದಂಡವಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯುವ ವೇಳೆ ಈ ಪ್ರಮುಖ ಆದೇಶವನ್ನು ಹೊರಡಿಸಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಕೇವಲ ಮತದಾನದ ಪ್ರಕ್ರಿಯೆಯನ್ನಷ್ಟೇ ಅವಲಂಬಿಸಿಲ್ಲ, ಬದಲಿಗೆ ನಿಖರವಾದ ಮತ್ತು ವಿಶ್ವಾಸಾರ್ಹವಾದ ಮತದಾರರ ಪಟ್ಟಿಯನ್ನು ಹೊಂದುವುದೂ ಅದರ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನಗರೀಕರಣ ಮತ್ತು ಆಂತರಿಕ ವಲಸೆಯ ಕಾರಣಗಳಿಂದಾಗಿ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ಚುನಾವಣಾ ಆಯೋಗಕ್ಕೆ ಇಂತಹ ವಿಶೇಷ ಪರಿಷ್ಕರಣೆ ನಡೆಸುವ ಅಧಿಕಾರವಿದೆ ಎಂದು ಕೋರ್ಟ್ ಸಮರ್ಥಿಸಿಕೊಂಡಿದೆ