ಸೌದಿ ಅರೇಬಿಯದ ತಾಯಿಫ್ ಬಳಿ ಕಾರು ಅಪಘಾತ: ಹಳೆಯಂಗಡಿ ಮೂಲದ ನಾಲ್ವರು ವಿಧಿವಶ

ಕರಾವಳಿ

ಮದೀನಕ್ಕೆ ಉಮ್ರಾ ನಿರ್ವಹಿಸಲು ತೆರಳುತ್ತಿದ್ದಾಗ ಮೂರು ತಿಂಗಳ ಹಸುಗೂಸು ಸಹಿತ ಒಂದೇ ಕುಟುಂಬದ ನಾಲ್ವರು ರಿಯಾದ್ ಸಮೀಪದ ಝಲ್ಪಾ ಎಂಬಲ್ಲಿ ಕಾರು ಅಪಘಾತವಾಗಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ವರದಿಯಾಗಿದೆ.

ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಶಮೀಮ್‌ ಮತ್ತು ಝರೀನಾ ದಂಪತಿಯ ಪುತ್ರಿ ಹಿಬಾ, ಆಕೆಯ ಪತಿ ಮುಹಮ್ಮದ್‌ ರಮೀಝ್‌, ಮಕ್ಕಳಾದ ಆರೂಶ್‌ ಮತ್ತು ರಾಹ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್‌ ಎಂಬವರ ಮಗಳು ಫಾತಿಮಾ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ರಿಯಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಪಘಾತಕ್ಕೀಡಾಗಿದ್ದ ಕಾರಿನಲ್ಲಿದ್ದ ಹಿಬಾ ಅವರ ಇನ್ನೋರ್ವ ಸಹೋದರಿ ಲುಬ್ನಾ ಅವರ ಮಗ ಈಸಾಂ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮೃತ ಹಿಬಾ ಅವರ ತಂದೆ ಶಮೀಮ್‌ ತಾಯಿ ಝರೀನ ಮತ್ತು ಮೊಮ್ಮಕ್ಕಳು ಒಂದು ಕಾರಿನಲ್ಲಿ ಮತ್ತು ಹಿಬಾ ತನ್ನ ಕುಟುಂಬದೊಂದಿಗೆ ಇನ್ನೊಂದು ಕಾರಿನಲ್ಲಿ ಮಂಗಳವಾರ ಫಜರ್‌ ನಮಾಝ್‌ ಮುಗಿಸಿಕೊಂಡು ಉಮ್ರಾ ಯಾತ್ರೆ ಆರಂಭಿಸಿದ್ದರು.

ರಮೀಝ್‌ ಅವರು ಚಲಾಯಿಸುತ್ತಿದ್ದ ಕಾರು ರಿಯಾದ್ ನಿಂದ ತಾಯೀಫ್ ಗೆ ಹೋಗುವ ಮಾರ್ಗ ಮಧ್ಯದ ಸುಮಾರು 250 ಕಿ.ಮೀ. ದೂರದದಲ್ಲಿರುವ ಝುಲ್ಫಾ ಎಂಬಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಿಂದ ಹಲವು ಮೀಟರ್‌ ಗಳಷ್ಟು ದೂರಕ್ಕೆ ಹಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ ರಮೀಝ್‌, ಹಿಬಾ ಮತ್ತು ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ