ಮಹಾರಾಷ್ಟ್ರದ ರಾಜಕೀಯ ಧುರೀಣ, ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ

ರಾಷ್ಟ್ರೀಯ

ಮಹಾರಾಷ್ಟ್ರದ ರಾಜಕೀಯ ಧುರೀಣ, ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿರವರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆಯಲ್ಲಿ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮುಂಬೈನ ಬಾಂದ್ರಾದ ಪೂರ್ವ ವಲಯದ ನಿರ್ಮಲ್ ನಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ದಸರಾ ಪ್ರಯುಕ್ತ ಬಾಬಾ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 ರ ಸುಮಾರು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಾಬಾ ಅವರ ಮೇಲೆ ಪಿಸ್ತೂಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದರು. ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದ ಬಾಬಾ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಭಾನುವಾರ ತಡರಾತ್ರಿ 12.30ಕ್ಕೆ ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿತರು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್ ಸಹಚರರು ಎನ್ನಲಾಗಿದೆ. ಬಂಧಿತರನ್ನು ಕರ್ನೈಲ್ ಸಿಂಗ್ ಹಾಗೂ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ.

ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಬಿಹಾರ ಮೂಲದ ಬಾಬಾ ಸಿದ್ಧಿಕಿ ಅವರು ಕಳೆದ ಫೆಬ್ರುವರಿಯಲ್ಲಿ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಬಣದ ಎನ್‌ಸಿಪಿ ಸೇರಿದ್ದರು. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು, ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. 2004ರಿಂದ 2008ರವರೆಗಿನ ವಿಲಾಸ್‌ರಾವ್ ದೇಶಮುಖ್ ಅವರ ಸರ್ಕಾರದಲ್ಲಿ ಬಾಬಾ ಅವರು ಕಾರ್ಮಿಕ ಸಚಿವರಾಗಿದ್ದರು. ಇವರು ನಟ ಸಲ್ಮಾನ್ ಖಾನ್‌ ಅವರಿಗೆ ಆಪ್ತರಾಗಿದ್ದರು.