500 ನಕಲಿ ಚಿನ್ನದ ಬಳೆಗಳು..2 ಕೋಟಿ ಮಕ್ಮಲ್ ಟೋಪಿ.. ಪಡೀಲ್ ಸಮಾಜ ಸೇವಾ ಸಹಕಾರಿ ಸಂಘದ ಸ್ವಾಹಾ ಪುರಾಣ.!
ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು ಎರಡು ಕೋಟಿಗೂ ಅಧಿಕ ರೂಪಾಯಿ ಸಾಲ ಪಡೆದು ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದೀಕ್ ವಂಚಿಸಿದ ಆರೋಪಿ.
500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದೀಕ್ 2,11,89,800 ರೂಪಾಯಿ ಸಾಲ ಪಡೆದು, ಮೋಸ ಮಾಡಿದ್ದಾನೆ. ಹೀಗಾಗಿ ಅಬೂಬಕ್ಕರ್ ಸಿದ್ದೀಕ್, ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿ ಸಹಕಾರಿ ಸಂಘದ ಸರಫ್ (ಚಿನ್ನ ಪರೀಕ್ಷಕ) ವಿವೇಕ್ ಆಚಾರ್ಯ ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೂರುದಾರರಾದ ಸಂಘದ ಮಾಜಿ ನಿರ್ದೇಶಕ ಲೋಕನಾಥ ಡಿ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುತ್ತೂರು ಈಶ್ವರ ಮಂಗಳ ನಿವಾಸಿ, ಪ್ರಕರಣದ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದೀಕ್ ಎಂಬಾತ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 2,22,89,800 ರೂಪಾಯಿ ಸಾಲ ಪಡೆದಿದ್ದಾನೆ. ಈ ಚಿನ್ನಾಭರಣವನ್ನು ಪರಿಶೀಲಿಸಿದ ಸಂಘದ ಸರಫ್ ವಿವೇಕ್ ಆಚಾರ್ಯ ಅದು ನೈಜ ಚಿನ್ನವೆಂದು ದೃಡೀಕರಿಸಿದ್ದಾರೆ. ಸಂಘದ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪಕರ ನಿರ್ದೇಶನದಂತೆ ಶಾಖೆಯ ಪ್ರಭಾರ ವ್ಯವಸ್ಥಾಪಕ ಪ್ರಶಾಂತ್ ಈ ಭಾರೀ ಮೊತ್ತದ ಸಾಲವನ್ನು ನೀಡಿದ್ದರು ಎಂದು ಆರೋಪಿಸಿದರು. ಅಬೂಬಕ್ಕರ್ ಸಿದ್ದೀಕ್ ಮೊದಲಿನಿಂದಲೂ ಬ್ಯಾಂಕ್ ನ ಗ್ರಾಹಕರಾಗಿದ್ದರು. 2023 ನವೆಂಬರ್ ತಿಂಗಳಿನಲ್ಲಿ ಒಂದೇ ರೀತಿಯ 500 ನಕಲಿ ಚಿನ್ನದ ಬಳೆ ಅಡವಿಟ್ಟು ಸಾಲ ಪಡೆದಿದ್ದಾರೆ. ಸಾಲವನ್ನು ಮೂರು ತಿಂಗಳಲ್ಲಿ ತೀರಿಸಬೇಕಿತ್ತು ಎಂದು ಹೇಳಿದರು.

ಆದರೆ ಸಾಲ ತೀರಿಸದೆ ಇದ್ದಾಗ, ಬ್ಯಾಂಕ್ ನ ಪ್ರಭಾರ ಮ್ಯಾನೇಜರ್ ಅವರು ಅನುಮಾನಗೊಂಡು ಬೇರೆಯವರಿಂದ ಮರು ತಪಾಸಣೆ ನಡೆಸಿದಾಗ ಚಿನ್ನ ನಕಲಿ ಎಂದು ಗೊತ್ತಾಗಿದೆ. ತಕ್ಷಣ ಜನರಲ್ ಮ್ಯಾನೇಜರ್ ಸರಫ್ ಅವರಿಗೆ ಪತ್ರ ಬರೆದಿದ್ದಾರೆ. ಸರಿಯಾಗಿ ಚಿನ್ನವನ್ನು ಪರೀಕ್ಷೆ ಮಾಡದ ಕಾರಣ ಬ್ಯಾಂಕ್ ಗೆ 2 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ. ನೀನು ಅದನ್ನು ತಕ್ಷಣ ಪಾವತಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಸಮಾಜ ಸೇವಾ ಸಹಕಾರಿ ಸಂಘ ಜಿಲ್ಲೆಯಲ್ಲಿ 16 ಶಾಖೆ ಹೊಂದಿದೆ. ಮಂಗಳೂರಿನ ಪಡೀಲ್ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಚಿನ್ನ ಪರೀಕ್ಷೆ ನಡೆಸುವ ಸರಪ, ಬ್ಯಾಂಕ್ ನ ಅಧ್ಯಕ್ಷ, ನಿರ್ದೇಶಕರು, ಮ್ಯಾನೇಜರ್, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಬ್ಯಾಂಕ್ ನ ಸದಸ್ಯರು, ಮಾಜಿ ನಿರ್ದೇಶಕ ಡಿ. ಲೋಕನಾಥ್ ದೂರಿನ ಮೇರೆಗೆ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್ ನ ಸರಪ ವಿವೇಕ್ ಆಚಾರ್ಯನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಅಬೂಬಕ್ಕರ್ ಸಿದ್ದೀಕ್ ಗಾಗಿ ಹುಡುಕಾಟ ಮುಂದುವರಿದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
