ಅಕ್ಷಯ್ ಹಂತಕ ಕೇಶವ ಮೇಲೆ ಮುಗಿಬಿದ್ದ ನಟೋರಿಯಸ್ ರೌಡಿ ಮುಖ್ತಾರ್ ನ ಪಡೆ.. ಚೊಟ್ಟೆ ನೌಶಾದ್ ಮೇಲೂ ನಡೆದಿತ್ತು ಅಟ್ಯಾಕ್.!
ಮಂಗಳೂರಿನ ಕ್ರೈಂ ಇತಿಹಾಸದಲ್ಲೇ ಅತ್ಯಂತ ಘೋರ ಘಟನೆ ನಡೆದದ್ದು 2015 ನವೆಂಬರ್ 2 ರಂದು. ಅದು ಮಂಗಳೂರಿನ ಸಬ್ ಜೈಲಿನಲ್ಲಿ. ಈ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದ ಮಾಡೂರು ಯೂಸುಫ್ ಹಾಗೂ ಮೂಲತಃ ಮಂಗಳೂರಿನ ನಿವಾಸಿ ಮುಂಬೈ ಅಂಡರ್ ವರ್ಲ್ಡ್ ನಲ್ಲಿ ಗುರುತಿಸಿಕೊಂಡಿದ್ದ 1994 ರಲ್ಲಿ ಹಫ್ತಕ್ಕಾಗಿ ಮಹೇಂದ್ರ ಪ್ರತಾಪ್ ರನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ, ಮಂಗಳೂರಿನ ಪ್ರಕರಣವೊಂದರಲ್ಲಿ ಶಾಮೀಲಾಗಿ ಮಂಗಳೂರು ಜೈಲಿನಲ್ಲಿದ್ದ ಗಣೇಶ್ ಶೆಟ್ಟಿ. ಇವರಿಬ್ಬರೂ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ನ ಬಲಗೈ ಬಂಟ ಛೋಟಾ ಶಕೀಲ್ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದರು. ಇದೇ ಜೈಲಿನಲ್ಲಿ ಛೋಟಾ ಶಕೀಲ್ ನ ಬಲಗೈ ಬಂಟ ರಶೀದ್ ಮಲಬಾರಿಯೂ ವಿಚಾರಣಾಧೀನ ಖೈದಿಯಾಗಿದ್ದ. ಈ ರಶೀದ್ ಮಲಬಾರಿಯನ್ನು ಅಂದಿನ ಸಿಸಿಬಿ ಇನ್ಸ್ ಪೆಕ್ಟರ್ ವೆಂಕಟೇಶ್ ಪ್ರಸನ್ನ ಕಾಸರಗೊಡಿನ ಚಟ್ಟಂಚಾಲ್ ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ರಶೀದ್ ಮಲಬಾರಿ ಬ್ಯಾಂಕಾಕ್ ನಲ್ಲಿ ನಡೆದಿದ್ದ ಭೂಗತ ಪಾತಕಿ ಛೋಟಾ ರಾಜನ್ ಹತ್ಯಾಯತ್ನ ಪ್ರಕರಣದಲ್ಲಿ ಛೋಟಾ ಶಕೀಲ್ ಜೊತೆಗೆ ಪಾಲ್ಗೊಂಡಿದ್ದ.
ಮಂಗಳೂರು ಹೊಸ ಸಬ್ ಜೈಲಿನಲ್ಲಿ ಎರಡು ಬ್ಯಾರಕ್ ಗಳಿವೆ. ಎ ಮತ್ತು ಬಿ. ಎ ಬ್ಯಾರಕ್ ನಲ್ಲಿ ಮುಸ್ಲಿಂ ಖೈದಿಗಳು, ಬಿ ಬ್ಯಾರಕ್ ನಲ್ಲಿ ಹಿಂದೂ ಖೈದಿಗಳನ್ನು ಇರಿಸಲಾಗಿದೆ. ಮಾಡೂರು ಯೂಸುಫ್ ನನ್ನು ಹತ್ಯೆ ಮಾಡುವ ಪ್ಲ್ಯಾನ್ ರೂಪುಗೊಂಡಿದ್ದು ಬಿ ಬ್ಯಾರಕ್ ನಲ್ಲಿ.

ಮುಸ್ಲಿಂ ಡಾನ್ ಆಗಿ ಉದಯಿಸಿದ್ದ ಮಾಡೂರು ಯೂಸುಫ್ ನನ್ನು ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿ ಇಂಟರ್ ಪೋಲ್ ಮೂಲಕ ಸೌದಿಯಿಂದ ಕರೆದುಕೊಂಡು ಬಂದು ವಿಚಾರಣಾ ಖೈದಿಯಾಗಿ ಮಂಗಳೂರು ಜೈಲಿನಲ್ಲಿ ಇಟ್ಟಿದ್ದರು. ಜೈಲಿನಲ್ಲೇ ಮುಸ್ಲಿಂ ಕ್ರಿಮಿನಲ್ ಜಗತ್ತನ್ನು ಆಪರೇಟ್ ಮಾಡುತ್ತಿದ್ದ ಯೂಸುಫ್. ಭೂಗತ ಡಾನ್ ವಿಕ್ಕಿ ಶೆಟ್ಟಿ ತನ್ನ ಹವಾ ಕ್ರಿಯೇಟ್ ಮಾಡಲು ಜೈಲಿನೊಳಗೆ ತನ್ನ ಸಹಚರರ ಮೂಲಕ ಸ್ಕೆಚ್ ತಯಾರಿಸಿದ್ದ. ವಿಕ್ಕಿ ಶೆಟ್ಟಿ ಸಹಚರ ಆಕಾಶ ಭವನ ಶರಣ್ ಹೆಗಲಿಗೆ ಹತ್ಯೆಯ ಹೊಣೆ ನೀಡಲಾಗಿತ್ತು. ಹೊಸ ಜೈಲಿನಲ್ಲಿ ಭದ್ರತೆ ಹೆಚ್ಚಿರುವುದರಿಂದ ಸಾಧ್ಯವಿಲ್ಲ. ರಿಪೇರಿ ಕೆಲಸ ಇದೆಯೆಂದು ಹೊಸ ಜೈಲಿನಲ್ಲಿದ್ದ ಖೈದಿಗಳನ್ನು ಹಳೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆಕಾಶ್ ಭವನ ಶರಣ್ ನನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಶರಣ್ ಸಹಚರರು ಮಂಗಳೂರು ಜೈಲಿನಲ್ಲೇ ಇದ್ದರು.
ಬೆಳಿಗ್ಗೆ ಎದ್ದು ವಾಕಿಂಗ್ ಮಾಡುತ್ತಿರುವಾಗ ಮುಗಿಬಿದ್ದ ಆಕಾಶ್ ಭವನ ಸಹಚರರಾದ
ಶೋಭರಾಜ್, ಉಮೇಶ್, ಲತೇಶ್, ಶಿವರಾಜ್ ಮಾಡೂರು ಯೂಸುಫ್ ನನ್ನು ಅಟ್ಯಾಕ್ ಮಾಡಿ ಕೊಚ್ಚಿ ಹಾಕುತ್ತಾರೆ. ಯೂಸುಫ್ ನ ರಕ್ಷಣೆಗಾಗಿ ಬಂದ ಗಣೇಶ್ ಶೆಟ್ಟಿಯನ್ನು ಕೂಡ ಚಾಕು ಇರಿದು ಹತ್ಯೆ ಮಾಡುತ್ತಾರೆ. ಅಲ್ಲಿಗೆ ಸಬ್ ಜೈಲಿನೊಳಗೆ ಡಬ್ಬಲ್ ಮರ್ಡರ್ ನಡೆಯುತ್ತೆ. ಜೈಲಿನೊಳಗಡೆಯೆ ಹತ್ಯೆ ನಡೆಯುವ ಮೂಲಕ ಮಂಗಳೂರು ಬೆಚ್ಚಿ ಬಿದ್ದಿತ್ತು.

ಇತ್ತೀಚೆಗೆ ಸುಹಾಸ್ ಶೆಟ್ಟಿ ಹಂತಕ ಚೊಟ್ಟೆ ನೌಶಾದ್ ತನ್ನ ಆಪ್ತನನ್ನು ಭೇಟಿಯಾಗಲು ಜೈಲಿಗೆ ಬಂದಾಗ ಕಲ್ಲು, ಇಟ್ಟಿಗೆಯಿಂದ ಏಕಾಏಕಿ ದಾಳಿ ನಡೆಸಲಾಗಿತ್ತು ಆದರೆ ಆತ ಬಚವಾಗಿದ್ದ . ಅದೇ ರೀತಿ ಅಡುಗೆ ಮಾಡುತ್ತಿದ್ದ ಖೈದಿ ಅಕ್ಷಿತ್ ಎಂಬಾತನಿಗೆ ಅಬ್ದುಲ್ ರಹಿಮಾನ್ ಯಾನೆ ಮುನೀರ್, ಉಮರ್ ಶಿಹಾಬ್ ಎಂಬವರು ಹಲ್ಲೆ ನಡೆಸಿದ ಘಟನೆ ಕೂಡ ನಡೆದಿತ್ತು.
ಇದೀಗ ಮಂಗಳೂರು ಜೈಲಿನಲ್ಲಿ ಮತ್ತೆ ಮಾರಾಮಾರಿ ನಡೆದಿದೆ. ಪುತ್ತೂರಿನ ಅಕ್ಷಯ್ ಕಲ್ಲೇಗ ಮರ್ಡರ್ ಆರೋಪಿ ಕೇಶವ ಪಡೀಲ್ ಎಂಬಾತನ ಮೇಲೆ ಉಳ್ಳಾಲದ ಧರ್ಮನಗರದ ನಿವಾಸಿ, ನಟೋರಿಯಸ್ ರೌಡಿ ಮುಖ್ತಾರ್ ಎಂಬಾತನ ಪಡೆ ಭೀಕರ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಕೇಶವ ಪಡೀಲ್ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮುಖ್ತಾರ್ ಎಂಬಾತನ ಮೇಲೆ ಹದಿನೈದು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಈತನನ್ನು ಮೂರು ವರ್ಷಗಳ ಹಿಂದೆ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದರು.

ಮಂಗಳೂರು ಸಬ್ ಜೈಲಿನಲ್ಲಿ ಮುಸ್ಲಿಂ ಖೈದಿಗಳು, ಹಿಂದೂ ಖೈದಿಗಳಿಗೆ ಪ್ರತ್ಯೇಕ ಬ್ಯಾರಕ್ ಗಳು ಇದ್ದರೂ ಪದೇ ಪದೇ ಮಾರಾಮಾರಿ ನಡೆಯುತ್ತಿರುವುದು ಇಲ್ಲಿನ ಭದ್ರತೆಯ ವೈಫಲ್ಯ ಎಂದೇ ಹೇಳಬೇಕಾಗಿದೆ. ಮಾದಕ ವಸ್ತುಗಳು, ಮಾರಕಾಸ್ತ್ರಗಳು ಜೈಲಿನೊಳಗೆ ಯಾವುದೇ ಅಡೆತಡೆ ಇಲ್ಲದೆ ಸರಬರಾಜು ಆಗುತ್ತಿರುವುದು ಜೈಲಿನ ಭದ್ರತೆಯ ಬಗ್ಗೆ ಹಲವಾರು ಸಂದೇಹಗಳು ಏಳಲು ಕಾರಣವಾಗಿದೆ.
