ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ರವಿಚಂದ್ರ ನಾಯಕ್ ಅವರ ಇತ್ತೀಚಿನ ನಡವಳಿಕೆಯೊಂದು ಭಾರೀ ಸುದ್ಧಿಗೆ ಕಾರಣವಾಗಿದೆ. ಸರಕಾರಿ ಸಣ್ಣ ಪುಟ್ಟ ಹುದ್ದೆಯಲ್ಲಿರುವವರು ನಾಗರೀಕರನ್ನು, ಸಿಬ್ಬಂದಿಗಳನ್ನು ಅಸಡ್ಡೆಯಿಂದ ನೋಡುವ ಈ ಕಾಲಘಟ್ಟದಲ್ಲಿ ಮಹಾನಗರ ಪಾಲಿಕೆಯ ಉನ್ನತ ಹುದ್ದೆಯಲ್ಲಿರುವ ರವಿಚಂದ್ರ ನಾಯಕ್ ಅವರು ಇತ್ತೀಚೆಗಷ್ಟೇ ಪೌರ ಕಾರ್ಮಿಕರಿಂದ ಸನ್ಮಾನ ಪಡೆಯುತ್ತಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರು ಆಯುಕ್ತರ ಕಾಲಿಗೆ ನಮಸ್ಕರಿಸಿದಾಗ ಕೂಡಲೇ ಪೌರ ಕಾರ್ಮಿಕರ ಕಾಲು ಹಿಡಿದು ಕೈ ಮುಗಿದ ವಿದ್ಯಮಾನ ನಡೆದಿದೆ. ಪೌರ ಕಾರ್ಮಿಕರು ನಮ್ಮ ನಿಮ್ಮಂತಹ ಮನುಷ್ಯರು, ಅವರ ಸೇವೆ ಇಲ್ಲದಿದ್ದರೆ ನಗರದ ವ್ಯವಸ್ಥೆ ಯಾವ ರೀತಿ ತಳಮಟ್ಟಕ್ಕೆ ಇಳಿಯಬಹುದು ಅನ್ನುವ ಸಂದೇಶ ಇದರಲ್ಲಿ ಅಡಗಿದೆ. ಮಹಾನಗರ ಪಾಲಿಕೆಯ ಕಮೀಷನರ್ ಆಗಿದ್ದರೂ ತೃಣ ಮಾತ್ರ ಅಹಂಕಾರವಿಲ್ಲದ ಪ್ರಾಮಾಣಿಕ ಅಧಿಕಾರಿ ಮಂಗಳೂರಿಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ರವಿಚಂದ್ರ ನಾಯಕ್ ಈ ಹಿಂದೆ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದವರು. ತನ್ನ ನೇರ ನಡೆನುಡಿ, ಪ್ರಾಮಾಣಿಕ ಕರ್ತವ್ಯದಿಂದ ಜನಮನ್ನಣೆ ಗಳಿಸಿದವರು. ಇಂದಿನ ದಿನಗಳಲ್ಲಿ ಒಂದು ಸಣ್ಣ ಅಧಿಕಾರಿಯಾದರೂ ದೊಡ್ಡ ಅಧಿಕಾರಿ ರೀತಿ ವರ್ತಿಸುವ ಕಾಲಘಟ್ಟದಲ್ಲಿ ಯಾವುದೇ ಅಹಂಭಾವವಿಲ್ಲದೆ, ದಕ್ಷ ಅಧಿಕಾರಿ ಎಂಬ ಕೀರ್ತಿಗೆ ರವಿಚಂದ್ರ ನಾಯಕ್ ಪಾತ್ರರಾಗಿದ್ದಾರೆ.

ಈ ಮೊದಲು ರವಿಚಂದ್ರ ನಾಯಕ್ ಅವರು ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ, ಮಂಗಳೂರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ, ಮಂಗಳೂರು ಉಪವಿಭಾಗಾಧಿಕಾರಿ, ಮಂಗಳೂರು ತಹಶೀಲ್ದಾರ್ ಆಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರು ಕರ್ತವ್ಯದಲ್ಲಿ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸರಳತೆಗೆ ಹೆಸರಾಗಿದ್ದವರು. ಸರಳವಾಗಿ, ನ್ಯಾಯಯುತವಾಗಿ ಹಾಗೂ ಎಲ್ಲರಿಗೂ ಗೌರವ ಕೊಡುವ ಮನೋಭಾವ ಹೊಂದಿರುವ ನಗು ಮುಖದ ಅಪರೂಪದ ಅಧಿಕಾರಿ ರವಿಚಂದ್ರ ನಾಯಕ್.
