ಬಂಟ್ವಾಳ: ರಹಿಮಾನ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸಂಘಟಿತ ಅಪರಾಧ ತಡೆ ಕಾಯ್ದೆ( KCOCA Act ) ದಾಖಲು

ಕರಾವಳಿ

2025ರ ಮೇ 25 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪಿಕ್ ಅಪ್ ಚಾಲಕ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದ ಸಂಬಂಧ ಅ.ಕ್ರಂ ಕಲಂ:103(1) 109(1), 118(1), 118(2), 61(2) (ಎ), 249(ಎ), 238(ಎ) ಜೊತೆಗೆ 3(5) ಬಿ.ಎನ್.ಎಸ್. ಮತ್ತು ಕಲಂ: 25(1) (ಎ) ಭಾರತೀಯ ಶಸ್ತ್ರಾಸ್ತ್ರಗಳ ಕಾಯ್ದೆ 1959 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ 13 ಆರೋಪಿಗಳನ್ನು ಪೊಲೀಸರು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಕಲಂದರ್ ಶಾಫಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಬ್ದುಲ್ ರಹಿಮಾನ್ ಮತ್ತು ಕಂದರ್ ಶಾಫಿ ಹೊಳೆ ಬದಿಯಿಂದ ಪಿಕ್ಅಪ್‌ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ಮನೆಯೊಂದರ ಬಳಿ ಇಳಿಸುತ್ತಿದ್ದರು. ಈ ವೇಳೆ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್‌ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಇದನ್ನು ತಡೆಯಲು ಹೋದ ಕಲಂದರ್ ಶಾಫಿಗೂ ಚೂರಿಯಿಂದ ಎದೆಗೆ, ಬೆನ್ನಿಗೆ, ಕೈಗೆ, ತಿವಿದು ತಲವಾರಿನಿಂದ ಕಡಿದು, ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಪೊಲೀಸರು ರಹಿಮಾನ್ ಹತ್ಯೆಯಲ್ಲಿ ಭಾಗಿಯಾದ ದೀಪಕ್, ಚಿಂತನ್, ಪ್ರಥ್ವಿರಾಜ್ ಜೋಗಿ, ಸುಮಿತ್ ಬಿ. ಆಚಾರ್ಯ, ವಿ.ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ರವಿಸಂಜಯ್ ಜಿ.ಎಸ್., ಶಿವಪ್ರಸಾದ್ ತುಂಬೆ, ಪ್ರದೀಪ, ಶಾಹಿತ್ @ ಸಾಹಿತ್, ಸಚಿನ್ @ ಸಚ್ಚು ರೊಟ್ಟಿಗುಡ್ಡೆ, ರಂಜಿತ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಪ್ರಕರಣದ ಇನ್ನೊಬ್ಬ ಆರೋಪಿ ಭರತ್ ರಾಜ್ @ ಭರತ್ ಕುಮ್ಡೇಲು (29, ಪುದು ಗ್ರಾಮ) ಎಂಬಾತನು ಕೊಲೆಯ ಸೂತ್ರದಾರನಾಗಿದ್ದು, ಪೊಲೀಸರ ಕೈಗೆ ಸಿಗದೆ ಮರೆಸಿಕೊಂಡಿರುತ್ತಾನೆ. ರಹಿಮಾನ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಕರಣದ ಆರೋಪಿಗಳು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಸುಲಿಗೆ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (THE KARNATAKA CONTROL OF ORGANISED CRIME ACT- 2000) ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.