ಪುತ್ತೂರು: ಅಕ್ರಮ ಗೋ ಸಾಗಾಟಗಾರರ ಮೇಲೆ ಫೈರಿಂಗ್ ಪ್ರಕರಣ; ಆರೋಪಿಗಳನ್ನು ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆ ಹಲವರ ವಿರುದ್ಧ ಪ್ರಕರಣ ದಾಖಲು

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಸುಳ್ಳು ಸುದ್ದಿ ಹಾಗೂ ಮತೀಯ ಸಂಘರ್ಷಕ್ಕೆ ಕಾರಣವಾಗುವ ವಿಡಿಯೋ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮಕ್ಕೆ ಮುಂದಾಗಿದೆ. ಪೊಲೀಸ್ ಇಲಾಖೆಯ ಇಂತಹ ಕಟ್ಟುನಿಟ್ಟಿನ ಕ್ರಮ ಹಲವು ಸಾಮಾಜಿಕ ಜಾಲತಾಣದ ವೀರರ ನಿದ್ದೆಗೆಡಿಸಿದೆ. ಇದೀಗ ಇತ್ತೀಚೆಗೆ ಪುತ್ತೂರು ಭಾಗದಲ್ಲಿ ಅಕ್ರಮ ಗೋ ಸಾಗಾಟಗಾರರ ಮೇಲೆ ಫೈರಿಂಗ್ ನಡೆಸಿ ಪೊಲೀಸ್ ಇಲಾಖೆ ಆರೋಪಿಗಳ ಹೆಡೆಮುರಿ ಕಟ್ಟಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಸಕ್ರಮವಾಗಿ ಗೋ ಸಾಗಾಟ ಮಾಡಿರುವುದಾಗಿ, ಗೋ ಸಾಗಾಟಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆದಿದ್ದರು ಎಂಬ ಬಗ್ಗೆ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅನುಮಾನ ಪಡುವಂತಾಗಿತ್ತು. ಇದೀಗ ಪೊಲೀಸ್ ಇಲಾಖೆ ಈ ಬಗ್ಗೆ ದಾಖಲೆ ಬಿಡುಗಡೆಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಸಂದೇಶಗಳು ಹಾಗೂ ಸುದ್ಧಿಗಳು ನಕಲಿಯಾಗಿದ್ದು, ಕಿಡಿಗೇಡಿಗಳು ಆರೋಪಿಗಳನ್ನು ರಕ್ಷಿಸಲು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮ ಸಂಖ್ಯೆ: 115/2025. ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಕಾಯ್ದೆ ಮತ್ತು ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾನುವಾರುಗಳನ್ನು ಖರೀದಿ ಮಾಡಿರುವ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ದಾಖಲೆಗಳು ನಕಲಿ ಎಂಬುದಾಗಿ ಪೊಲೀಸರು ದೃಢೀಕರಿಸಿದ್ದಾರೆ. ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿರವರು ದೃಢೀಕರಿಸಿದಂತೆ, ಶುಕ್ರವಾರದಂದು ಮಾತ್ರ ಜಾನುವಾರು ಸಂತೆ ನಡೆಯುವುದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸದ್ರಿ ದಾಖಲೆಗಳು (ರಶೀದಿ ಕ್ರಮ ಸಂಖ್ಯೆ: 27653 ಹಾಗೂ 27654 ಗಳನ್ನು) ತಿದ್ದಿ ಸುಳ್ಳು ಸೃಷ್ಟನೆ ಮಾಡಿ ಪ್ರಸಾರ ಮಾಡಿರುವುದಾಗಿ ತಿಳಿದುಬಂದಿರುತ್ತದೆ. ಈ ಬಗ್ಗೆ ಆರ್.ಟಿ.ಓ ಅಧಿಕಾರಿ ಮತ್ತು ಪಶು ವೈದ್ಯಾಧಿಕಾರಿಯವರಿಂದ ಮಾಹಿತಿ ಪಡೆಯಲಾಗಿ, ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲು ಅನುಮತಿ ನೀಡಿರುವುದಿಲ್ಲವೆಂದು ಸಾಬೀತಾಗಿರುತ್ತದೆ.

ಈ ರೀತಿ ಸುಳ್ಳು ದಾಖಲೆಗಳನ್ನೆ ನೈಜ ದಾಖಲೆಗಳೆಂದು ತಿರುಚಿ ಆರೋಪಿಗಳನ್ನು ರಕ್ಷಿಸುವ ದುರುಧ್ಧೇಶದಿಂದ State office SDPI Karnataka ಎಂಬ ಹೆಸರಿನ“X”ಖಾತೆಯ ಖಾತೆದಾರರು, Thejasnews.com ನ ಮಾಲಕ/ಸಂಪಾದಕ ಮತ್ತು Sadath Bajathur ಎಂಬವರು ಹಾಗೂ ಇತರ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ ಮೂಲಕ, ಸಾರ್ವಜನಿಕರು ಉದ್ವೇಗಗೊಂಡು ಜನರು ಗುಂಪು ಕೂಡಿ ದೊಂಬಿಯಂತಹ ಅಪರಾಧ ನಡೆಸಲು ಸನ್ನಿವೇಶ ಸೃಷ್ಟಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 05.11.2025 ರಂದು ಅ.ಕ್ರ: 123-2025, ಕಲಂ: 233,240,338,353(1)(b),192,61(2)(b),238(c),r/w3(5))ಭಾರತೀಯ ನ್ಯಾಯ ಸಂಹಿತೆ 2023,ರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.