ಬ್ಯಾರಿ ಕಲಾರಂಗ ಮೈಕಾಲ ಇದರ ವತಿಯಿಂದ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಅಡ್ಡೂರು ಗರೋಡಿ ಮನೆ ಅಂಗಳದಲ್ಲಿ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪೂರ್ವಜರ ಕಾಲದ ನೆನಪುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ ಮೂಡಿಬಂತು.

ಮದ್ರಸ ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷರಾದ ಎಂ ಎಚ್ ಹಾಜಿ ಮೊಹಿದ್ದೀನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾರಿ ಕಲಾರಂಗ ಮೈಕಾಲ ಇದರ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯರಿಗೆ ಕಿಟ್ ನೀಡಿ ಗೌರವಾರ್ಪಣೆ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ “ಬ್ಯಾರಿ ಕಲಾರಂಗ ಮೈಕಾಲ ಇದರ ಸೇವೆ ಅನನ್ಯವಾದುದು. ಹಿರಿಯರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದೀರಿ. ಬ್ಯಾರಿ ಸಮುದಾಯ ಅನ್ನುವುದು ಸ್ವಾಭಿಮಾನ ಉಳ್ಳ ಜನಾಂಗ. ನಮ್ಮ ಹಿರಿಯರು ಕಷ್ಟಪಟ್ಟು ಮೇಲೆ ಬಂದ ಸಮುದಾಯ ಇದಾಗಿದೆ. ಈ ಸಮುದಾಯದ ಕೊಡುಗೆ ಸಮಾಜಕ್ಕೆ ಅಪಾರವಿದೆ. ನಮ್ಮ ಹಿರಿಯರನ್ನು ನೆನಪಿಸುವ ಮೂಲಕ ನಮ್ಮ ಹಿಂದಿನ ಗತಕಾಲದ ವೈಭವವನ್ನು ತೆರೆದಿಟ್ಟಿದ್ದೀರಿ. ಆಯೋಜಕರ ಪ್ರಯತ್ನಕ್ಕೆ ಅಭಾರಿ” ಎಂದು ಈ ಸಂದರ್ಭದಲ್ಲಿ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಯು.ಎಚ್. ಉಮ್ಮರ್, ಮಾಜಿ ಜಿ.ಪಂ ಸದಸ್ಯರಾದ ಯು.ಪಿ ಇಬ್ರಾಹಿಂ ಅಡ್ಡೂರು, ಡಾ. ಸಿದ್ದೀಕ್ ಅಡ್ಡೂರು, ಮುಹಮ್ಮದಾಲಿ ಕಮ್ಮರಡಿ, ಅಖಿಲ ಭಾರತ ಬ್ಯಾರಿ ಮಹಾಸಭಾ ಸಂಚಾಲಕರಾದ ಶಾಕೀರ್ ಹಾಜಿ, ಬ್ಯಾರಿ ವಾರ್ತೆ ಸಂಪಾದಕರಾದ ಬಷೀರ್ ಬೈಕಂಪಾಡಿ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾದ ಅಬ್ದುಲ್ ರಹಿಮಾನ್ ಕೋಡಿಜಾಲ್, ಮೇಲ್ತೆನೆ ಗೌರವಾಧ್ಯಕ್ಷರಾದ ಆಲಿ ಕುಂಞ ಪಾರೆ, ಬದ್ರಿಯಾ ಜುಮಾ ಮಸೀದಿ ಅಡ್ಡೂರು ಅಧ್ಯಕ್ಷರಾದ ಅಹಮ್ಮದ್ ಬಾವಾ ಅಂಗಡಿಮನೆ, ಉಪಾಧ್ಯಕ್ಷ ಎ.ಕೆ ಅಶ್ರಫ್, ಗಲ್ಫ್ ಕಮಿಟಿ ದಮಾಮ್ ಅಧ್ಯಕ್ಷರಾದ ಅಬ್ದುಲ್ ರಝಾಕ್, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ದಿಲ್ಯಾದ್ ಅಶ್ರಫ್, ಮುಹಮ್ಮದ್ ಮನ್ಸೂರ್, ಮುಹಮ್ಮದ್ ಅಶ್ರಫ್, ಅಬ್ದುಲ್ ಜಬ್ಬಾರ್ ಅಡ್ಡೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ಯಾರಿ ಕಲಾರಂಗ ಮೈಕಾಲ ಇದರ ಪದಾಧಿಕಾರಿಗಳು ಹಾಜರಿದ್ದರು.

ಜಬ್ಬಾರ್ ಮಲ್ಲೂರು ಸ್ವಾಗತಿಸಿ, ಹಾರೀಸ್ ತೋಡಾರು ಧನ್ಯವಾದಗೈದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಖ್ಯಾತ ಹಾಡುಗಾರರಿಂದ ಬ್ಯಾರಿ ಹಾಡುಗಳು ಮತ್ತು ಕಾರ್ಯಕ್ರಮದ ಕೊನೆಯಲ್ಲಿ ‘ಇಂಡತ್ತ ರಾಜಾವು ನಾಲೆತ್ತೊ ಫಕೀರ್’ ಬ್ಯಾರಿ ಕಥಾ ಪ್ರಸಂಗ ನಡೆಯಿತು.
