ದಿನಾಂಕ 13.04.2026 ರಂದು ಅಜಯ್. ಕೆ, ಸೋಮವಾರಪೇಟೆ, ಮಡಿಕೇರಿ ಎಂಬವರು ತನ್ನ ಸ್ನೇಹಿತರಾದ ರಮೇಶ್ ಮತ್ತು ರಫೀಕ್ ಎಂಬವರ ಜೊತೆ ಕಾರಿನಲ್ಲಿ ತಣ್ಣೀರುಬಾವಿ ಬೀಚಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಜೊತೆಗೂಡಿ ಬಂದಿದ್ದು, ಬೆಳಗಿನ ಜಾವ 2:30 ಸುಮಾರಿಗೆ ತಣ್ಣೀರುಬಾವಿ ಬೀಚ್ ಸಮೀಪ ಬಂದು ಸ್ವಲ್ಪ ಮುಂದಕ್ಕೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆ ಹೋಗಿದ್ದು, ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿದ್ದವರನ್ನು ಕಂಡು ಕಾರನ್ನು ನಿಲ್ಲಿಸಿ, ಅವರಲ್ಲಿ ವಿಳಾಸ ಕೇಳುವ ಸಲುವಾಗಿ ಅವರನ್ನು ಮಾತನಾಡಿಸಿರುತ್ತಾರೆ.
ಆ ಸಮಯ ಅವರುಗಳು ವಿಳಾಸವನ್ನು ತೋರಿಸುವುದಾಗಿ ಹೇಳಿ ಕಾರಿನ ಹಿಂಬದಿಯಲ್ಲಿ ಕುಳಿತು ಕಾರನ್ನು ಚಲಾಯಿಸಿಲು ಅಜಯ್ ಕೆ. ರವರಿಗೆ ಹೇಳಿ ಸ್ವಲ್ಪ ಮುಂದಕ್ಕೆ ಹೋದ ನಂತರ ಕಾರನ್ನು ನಿಲ್ಲಿಸಿದ ಇಬ್ಬರು ಆರೋಪಿಗಳು ತಮ್ಮ ಬಳಿ ಇದ್ದ ಸ್ಕ್ರೂ ಡ್ರೈವರನ್ನು ತೆಗೆದು ಪಿರ್ಯಾದುದಾರ ಮತ್ತು ಸ್ನೇಹಿತರಿಗೆ ಚುಚ್ಚುವುದಾಗಿ ಬೆದರಿಸಿ, ಕಾರಿನ ಮುಂಭಾಗದ ಗ್ಲಾಸನ್ನು ಸ್ಕ್ರೂ ಡ್ರೈವರ್ ಹಿಡಿಯಿಂದ ಗುದ್ದಿ ಹಾನಿಗೊಳಿಸಿ, ಅಜಯ್ ಮತ್ತು ಸ್ನೇಹಿತರ ಬಳಿ ಇದ್ದ ಸುಮಾರು 9 ಸಾವಿರ ರೂ. ಮೌಲ್ಯದ ಟೈಟಾನ್ ವಾಚ್, 3 ಸಾವಿರ ರೂ. ಮೌಲ್ಯದ ಪಾಸ್ಟ್ ಟ್ರಾಕ್ ಕಂಪೆನಿಯ ವಾಚ್ ಮತ್ತು 2 ಸಾವಿರ ರೂಪಾಯಿ, ಅಲ್ಲದೇ ಕ್ಯಾಮಾರಕ್ಕೆ ಅಳವಡಿಸುವ ಸುಮಾರು 8 ಸಾವಿರ ರೂ. ಮೌಲ್ಯದ ಗಿಂಬಲ್, 2 ಸಾವಿರ ಮೌಲ್ಯದ ಪವರ್ ಬ್ಯಾಂಕ್ ಒಟ್ಟು 25 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಿತ್ತುಕೊಂಡು, ಕೃತ್ಯ ನಡೆದ ಸ್ಥಳದಿಂದ ಇನ್ನೊಬ್ಬ ಸ್ನೇಹಿತನ ಬೈಕಿನಲ್ಲಿ ಮೂರು ಮಂದಿ ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 49/2026 ರಂತೆ ಪ್ರಕರಣ ದಾಖಲಿಸಿದ ಪೊಲೀಸರು, ಠಾಣಾ ನಿರೀಕ್ಷಕರಾದ ಸಲೀಂ ಅಬ್ಬಾಸ್, ಪಿ.ಎಸ್.ಐ ಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ದಿನಾಂಕ 13-4-2026 ರಂದು ಆರೋಪಿಗಳಾದ ಮೊಹಮ್ಮದ್ ಸಿನಾನ್ ಮತ್ತು ಝಹೀರ್ ನಿಸಾರ್, ಕಸಬಾ ಬೆಂಗ್ರೆ ಎಂಬವರನ್ನು ಖಚಿತ ಮಾಹಿತಿ ಮೇರೆಗೆ ಕಸಬಾ ಬೆಂಗ್ರೆಯಲ್ಲಿ ವಶಕ್ಕೆ ಪಡೆದು, ಸುಲಿಗೆ ಮಾಡಿದ ಸೊತ್ತುಗಳನ್ನು ಹಾಗೂ ಆರೋಪಿತರು ಕೃತ್ಯಕ್ಕೆ ಬಳಸಿದ ಸ್ಕ್ರೂ ಡ್ರೈವರನ್ನು ಸ್ವಾಧೀನಪಡಿಸಿಕೊಂಡು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಕೃತ್ಯದಲ್ಲಿ ಪಾಲ್ಗೊಂಡ ಇನ್ನೊಬ್ಬ ಆರೋಪಿ ಚಂದು ಹಾರೀಸ್ ಕಸಬಾ ಬೆಂಗ್ರೆ ಎಂಬಾತನು ತಲೆಮರೆಸಿಕೊಂಡಿದ್ದು, ಈತನನ್ನು ದಿನಾಂಕ 22-4-2026 ರಂದು ದಸ್ತಗಿರಿ ಮಾಡಿ ಆತನಿಂದ ಸುಲಿಗೆ ಮಾಡಿದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ಅನ್ನು ವಶಕ್ಕೆ ಪಡೆದಿರುತ್ತಾರೆ. ಚಂದು ಹಾರೀಸ್ ಎಂಬಾತನ ವಿರುದ್ಧ ವಿವಿದ ಠಾಣೆಗಳಲ್ಲಿ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ ಪಟ್ಟಿ ತೆರೆಯಲಾಗಿದ್ದು, ಈತನ ವಿರುದ್ಧ ಘನ ನ್ಯಾಯಾಲಯದಲ್ಲಿ ಹಳೆಯ ಪ್ರಕರಣಗಳಲ್ಲಿ ಮೂರು ವಾರೆಂಟ್ಗಳು ಕೂಡ ಜಾರಿಯಾಗಲು ಬಾಕಿ ಇರುತ್ತದೆ. ತಲೆ ಮರೆಸಿಕೊಂಡಿದ್ದ ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
