‘ಒನ್ ಮ್ಯಾನ್ ಆರ್ಮಿ ‘ ಬಿಟ್ಟುಬಿಡಿ; ನಾಯಕರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಿ: ಸಿಎಂ ಡಿಕೆಶಿ ಗೆ ಹೈಕಮಾಂಡ್ ಖಡಕ್ ಸೂಚನೆ

ರಾಜ್ಯ

ಸಿದ್ದರಾಮಯ್ಯರ ಮನಸ್ಸು ಗೆಲ್ಲಿ, ಚುನಾವಣಾ ಪರ್ವ ಇರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡಿ; ಹೈಕಮಾಂಡ್ ತಾಕೀತು

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳದೆ ಸಾಮೂಹಿಕ ನಾಯಕತ್ವದಲ್ಲೇ ಮುನ್ನಡೆಯುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌‍ ಹೈಕಮಾಂಡ್‌ ಕಟ್ಟುನಿಟ್ಟಿನ ಆದೇಶ ನೀಡಿದೆ ಎನ್ನಲಾಗಿದೆ. ಕೆಲವು ವಿಚಾರಗಳಲ್ಲಿ ಡಿ.ಕೆ.ಶಿ ಮುನ್ನುಗ್ಗುವ ಪ್ರವೃತ್ತಿ ಹೊಂದಿದ್ದು, ಸರಿ ಎನಿಸಿದ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸಹಜ ಪ್ರವೃತಿಯಾಗಿದೆ. ಹಲವಾರು ಸಂದರ್ಭಗಳಲ್ಲಿ ಕಾಂಗ್ರೆಸ್‌‍ ಅಧ್ಯಕ್ಷರಾಗಿ ಪ್ರಮುಖ ಹಾಗೂ ಪ್ರಭಾವಿಗಳನ್ನೇ ಸಂಘಟನೆ ಚಟುವಟಿಕೆಯಿಂದ ಹೊರ ಹಾಕಿದ ಉದಾಹರಣೆಗಳಿವೆ. ತಮ್ಮ ರಾಜಕೀಯ ವಿರೋಧಿಗಳ ಲೆಕ್ಕಾಚಾರ ಚುಕ್ತಾ ಮಾಡುವಲ್ಲಿಯೂ ಡಿ.ಕೆ.ಶಿವಕುಮಾರ್‌ ಎತ್ತಿದ ಕೈ. ಆದರೆ ಕಾಂಗ್ರೆಸ್‌‍ ಪಕ್ಷದ ಹಿತದೃಷ್ಟಿಯಿಂದ ಇದನ್ನು ನಿಯಂತ್ರಿಸಿಕೊಳ್ಳಬೇಕು. ಏಕಪಕ್ಷೀಯ ನಿರ್ಧಾರದ ಪ್ರವೃತ್ತಿ ಚುನಾವಣೆಯ ಮೇಲೆ ಗಾಢ ಪರಿಣಾಮ ಬೀರಲಿದೆ ಎಂಬ ಆತಂಕ ಹೈಕಮಾಂಡ್‌ಗೆ ಇದೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಸೂಕ್ಷ್ಮ, ನಯ-ನಾಜೂಕು ನಿರ್ಧಾರಗಳನ್ನು ಪಾಲಿಸುವಂತೆ ವರಿಷ್ಠ ನಾಯಕರು ಹಿತ ಬೋಧನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ,

ಪ್ರಮುಖವಾಗಿ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವಂತೆ ವಿಶೇಷ ಸೂಚನೆ ನೀಡಲಾಗಿದೆ. ಎರಡು ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌‍ನ ಗೆಲುವಿಗೆ ಸಿದ್ದರಾಮಯ್ಯ ಅವರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ಮುಂದಿನ ಚುನಾವಣೆಯಲ್ಲಿ ಅವರ ಮಾರ್ಗದರ್ಶನ ಮತ್ತು ನಾಯಕತ್ವ ಪಕ್ಷಕ್ಕೆ ಅಗತ್ಯ ಇದೆ. ಯಾವುದೇ ಸಂದರ್ಭದಲ್ಲೂ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಹಿತರಕ್ಷಣೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವಂತೆ ತಾಕೀತು ಮಾಡಿರುವುದಾಗಿ ತಿಳಿದು ಬಂದಿದೆ.

ಡಿ.ಕೆ.ಶಿವಕುಮಾರ್‌ ಅವರ ಸಂಪುಟಕ್ಕೆ 13 ಮಂದಿ ಸಚಿವರ ಸೇರ್ಪಡೆಯಾಗಿದೆ. ಇನ್ನೂ 20 ಸ್ಥಾನಗಳು ಖಾಲಿ ಇವೆ. ನಿಗಮ ಮಂಡಳಿಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಹುದ್ದೆಗಳು ತೆರವಾಗಲಿದ್ದು, ಅವುಗಳಿಗೆ ನೇಮಕಾತಿಯಾಗಬೇಕಿದೆ. ಬಿಬಿಎಂಪಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಎಚ್ಚರಿಕೆ ವಹಿಸಬೇಕಿದೆ. ಇತರ ಹಿರಿಯ ನಾಯಕರ ಜೊತೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಲಾಗಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ಯಾವ ರೀತಿ ಸೌಹಾರ್ದತೆಯನ್ನು ಕಾಯ್ದುಕೊಳ್ಳಲಾಗಿತ್ತೋ ಅದೇ ಮಾದರಿಯನ್ನು ಮುಂದುವರಿಸಬೇಕು. ಸಂಪುಟ ವಿಸ್ತರಣೆ ಬಳಿಕ ಒಂದಿಷ್ಟು ಅಸಮಾಧಾನಗಳು ಕಂಡು ಬರಬಹುದು. ಶಾಸಕರ ಜೊತೆ ವ್ಯಕ್ತಿಗತ ಸಂಪರ್ಕ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಸಚಿವರಿಗೆ ಅವರ ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಏಕಪಕ್ಷೀಯವಾದ ನಿರ್ಧಾರ ಮತ್ತು ಅನಪೇಕ್ಷಣೀಯವಾದ ಹಸ್ತಕ್ಷೇಪಗಳನ್ನು ನಿಯಂತ್ರಿಸುವ ಅಗತ್ಯ ಇದೆ ಎಂದು ಹೇಳಲಾಗಿದೆ.

2028ರ ವಿಧಾನಸಭೆ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಲಿ, ಕಾಲ ಕಾಲಕ್ಕೆ ಜನಾಭಿಪ್ರಾಯಗಳನ್ನು ಸಂಗ್ರಹಿಸಿ, ಜನಸ್ನೇಹಿ ಆಡಳಿತ ನಡೆಸಬೇಕು ಎಂದು ಹಿರಿಯ ನಾಯಕರು ಹಿತವಚನ ನೀಡಿದ್ದಾರೆ ಎನ್ನಲಾಗಿದೆ.