ಕೋಕಾ ಪ್ರಕರಣ: ಬಂಧಿತ ಆರೋಪಿಗಳಿಗೆ ಮೈಸೂರಿನ KCOCA ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು

ರಾಜ್ಯ

ಕೋಕಾ ಪ್ರಕರಣದಲ್ಲಿ ಬಂದಿತರಾಗಿದ್ದ ಶ್ಯಾಮ್ ಸುಂದರ್ ಶೆಟ್ಟಿ, ಸುವಿನ್ ಕಾಂಚನ್ @ ಮುನ್ನ ಹಾಗೂ ಅಕ್ಷಯ್ ಎಂಬುವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಮೈಸೂರಿನ KCOCA ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.

ದಿನಾಂಕ 01-01-2026 ರಂದು ಸಂಜೆ ಸುಮಾರು 5:30ರ ಸಮಯಕ್ಕೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಮಂತೂರು ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಸಹಜುದ್ದೀನ್ ಆತನ ತಂದೆಯೊಂದಿಗೆ ಜಗ್ಗು ಶೆಟ್ಟಿ ಎಂಬವರ ಕೊಟ್ಟಿಗೆಯಲ್ಲಿ ಸಾಕುತ್ತಿದ್ದ ಕಂಬಳದ ಕೋಣಗಳ ಚಕಾರಿ ಮಾಡುತ್ತಿರುವ ಸಮಯದಲ್ಲಿ, ಬಿಳಿ ಬಣ್ಣದ ಕಾರಿನಲ್ಲಿ ಬಂದ ಶ್ಯಾಮ್ ಸುಂದರ್ ಶೆಟ್ಟಿ, ಸುವಿನ್ ಕಾಂಚನ್ @ ಮುನ್ನ ಹಾಗೂ ಅಕ್ಷಯ್ ಎಂಬವರು ಕಬ್ಬಿಣದ ರಾಡ್ ಹಿಡಿದು ಕೊಟ್ಟಿಗೆಗೆ ಅಕ್ರಮ ಪ್ರವೇಶ ಮಾಡಿ, ಸಹಜುದ್ದೀನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಂಬಳದಲ್ಲಿ ಗೆದ್ದ ಬಗ್ಗೆ ವಿಚಾರಿಸಿ, ಬೆದರಿಕೆ ನೀಡಿ, 50 ಸಾವಿರ ರೂ. ಹಣವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಹಣ ನೀಡಲು ಸಹಜುದ್ದೀನ್ ನಿರಾಕರಿಸಿದಾಗ, ಮಾತಿಗೆ ಮಾತು ಬೆಳೆದು ಆರೋಪಿಗಳು ಸಹಜುದ್ದೀನ್ ಎಂಬವರಿಗೆ ಕಬ್ಬಿಣದ ರಾಡಿನ್ ಬೀಸಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಘಟನೆಯನ್ನು ಸಹಜುದ್ದೀನ್ ರವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲು ಶುರು ಮಾಡಿದಾಗ ಆರೋಪಿಗಳು ಸಹಜುದ್ದೀನ್ ಮತ್ತು ಅವರ ತಂದೆಗೆ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ.

ಆರೋಪಿಗಳು ಹಣ ಸುಲಿಗೆ ಮಾಡುವ ಏಕೈಕ ಉದ್ದೇಶದಿಂದ ಜಾನುವಾರುಗಳನ್ನು ಸಾಕುತ್ತಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಅಡ್ಡಗಟ್ಟಿ, ಕೈಯಿಂದ ಹಲ್ಲೆ ಮಾಡಿ, ರಾಡ್ ಬೀಸಿ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಸಹಜುದ್ದೀನ್ ರವರು ದಿನಾಂಕ: 01-01-26 ರಂದು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ದೂರನ್ನು ನೀಡಿದ್ದರು.

ಸದ್ರಿಯವರು ನೀಡಿದ ದೂರಿನ ಅಧಾರದಲ್ಲಿ ಪೊಲೀಸರು BNS ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ ಮುಲ್ಕಿ ಪೊಲೀಸರು ಆರೋಪಿಗಳು ಸಂಘಟಿತ ಅಪರಾಧವನ್ನು ಎಸಗಿರುತ್ತಾರೆ ಎಂದು “ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ”(KCOCA) ಕಾಯ್ದೆಯನ್ವಯ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಪುತ್ತೂರಿನ “ಕಜೆ ಲಾ ಚೇoಬರ್” ಇದರ ಮುಖ್ಯಸ್ಥರಾದ ನ್ಯಾಯವಾದಿ ಶ್ರೀ ಮಹೇಶ್ ಕಜೆ, ಪ್ರಸಾದ್ ಕುಮಾರ್, ರಾಘವೇಂದ್ರ ಸಿ ವಿ ರವರ ಮುಖಾಂತರ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು KCOCA ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಸದ್ರಿ ಪ್ರಕರಣದ ವಾದ ವಿವಾದವನ್ನು ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು KCOCA ವಿಶೇಷ ನ್ಯಾಯಾಲಯ ಮೈಸೂರು ಇವರು ಪ್ರಕರಣ ಮೂರು ಮಂದಿ ಆರೋಪಿಗಳಿಗೆ ದಿನಾಂಕ: 02-06-2026 ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ.