ಸಿಪಿಐಎಂ ವತಿಯಿಂದ ಉಳ್ಳಾಲ ಸರಕಾರಿ ಆಸ್ಪತ್ರೆ ಮುಂಭಾಗ ಮಾನವ ಸರಪಳಿ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ, ಸರಕಾರಿ ಆಸ್ಪತ್ರೆಗಳನ್ನು ರಕ್ಷಿಸಿ ಎಂಬ ಬೇಡಿಕೆಯೊಂದಿಗೆ ಸಿಪಿಐಎಂ ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ ಉಳ್ಳಾಲ ಸಮುದಾಯ ಆಸ್ಪತ್ರೆ ಮುಂಭಾಗ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಮಾನವ ಸರಪಳಿ ತರುವಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಆರೋಗ್ಯ ರಂಗ ವ್ಯಾಪಾರೀಕರಣಗೊಳ್ಳಬಾರದು ಎಂಬುದು ಸಂವಿಧಾನದ ಆಶಯ. ಖಾಸಗಿ ಆಸ್ಪತ್ರೆಗಳ ಏಕಸ್ವಾಮ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರ ಸಂಪೂರ್ಣವಾಗಿ ನಲುಗಿ ಹೋಗಿದೆ. ಜಿಲ್ಲೆಯ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳ ಜನಪ್ರತಿನಿಧಿಗಳು ಖಾಸಗಿ ಮೆಡಿಕಲ್ ಕಾಲೇಜುಗಳು ಹಿತರಕ್ಷಕರಂತೆ ವರ್ತಿಸುತ್ತಿದ್ದಾರೆ. ಇದರಿಂದ ಜನತೆ ತತ್ತರಿಸಿ ಹೋಗಿದ್ದಾರೆ.
ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಆದೇಶ ಸರಕಾರಿ ಆಸ್ಪತ್ರೆಗಳ ಪಾಲಿಗೆ ಮರಣ ಶಾಸನ ಆಗಿದೆ. ಈ ಕುರಿತು ಬಿಜೆಪಿಯ ಮೌನ ಪ್ರಶ್ನಾರ್ಹ. ಯು ಟಿ ಖಾದರ್ ಬಹಳ ಆಸ್ಥೆಯಿಂದ ಖಾಸಗಿಯವರಿಗೆ ಹಸ್ತಾಂತರಿಸಿರುವ ಉಳ್ಳಾಲ ಸಮುದಾಯ ಆಸ್ಪತ್ರೆ ಸಂಜೆ 4.00 ಗಂಟೆಗೆ ಬಂದ್ ಆಗುತ್ತದೆ. ಯು. ಟಿ ಖಾದರ್ ಮಾತ್ರ ಖಾಸಗಿಯವರ ಪರವಾಗಿ ತುತ್ತೂರಿ ಊದುತ್ತಾರೆ. ಯುಟಿ ಖಾದರ್ ಅವರನ್ನು ಚುನಾಯಿಸಿದ್ದು ಉಳ್ಳಾಲದ ಸಾಮಾನ್ಯ ಜನತೆ, ಖಾದರ್ ಮಾತ್ರ ಖಾಸಗಿ ಆಸ್ಪತ್ರೆಗಳ ಸಚಿವರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಜನತೆಯ ಆರೋಗ್ಯವನ್ನು ಕಾಪಾಡಬೇಕಾದ ರಾಜ್ಯ ಸರಕಾರ ಯಾವುದೇ ಮುಲಾಜಿಲ್ಲದೆ ಆರೋಗ್ಯ ಕ್ಷೇತ್ರವನ್ನೇ ಖಾಸಗಿಯವರ ಸುಪರ್ದಿಗೆ ಕೊಡುವ ಮೂಲಕ ಇಡೀ ದೇಶದ ಸಂಪತ್ತನ್ನು ಮಾರಿದ ಬಿಜೆಪಿಯವರಿಗಿಂತ ತಾನೇನೂ ಕಡಿಮೆ ಇಲ್ಲ ಎಂಬ ಸಂದೇಶವನ್ನು ನೀಡಿದೆ. ಅರೋಗ್ಯ ಕ್ಷೇತ್ರದ ಮಾರಾಟದಿಂದ ಜನತೆಯನ್ನು ಅನಾರೋಗ್ಯಕ್ಕೆ ತಳ್ಳಲು ಹೊರಟ ಯು.ಟಿ ಖಾದರ್ ರವರ ನಡೆ ಅನಾರೋಗ್ಯದ ಕಡೆ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು
ಸಭೆಯನ್ನುದ್ದೇಶಿಸಿ CPIM ಹಿರಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಯು ಜಯಂತ ನಾಯಕ್ ರವರು ಮಾತನಾಡಿದರು. ಮಾನವ ಸರಪಳಿಯಲ್ಲಿ CPIM ಜಿಲ್ಲಾ ನಾಯಕರಾದ ಶೇಖರ್ ಕುಂದರ್, ರಫೀಕ್ ಹರೇಕಳ, ಪದ್ಮಾವತಿ ಶೆಟ್ಟಿ, ಉಳ್ಳಾಲ ವಲಯ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ರೋಹಿದಾಸ್, ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಸುಂದರ ಕುಂಪಲ, ಇಬ್ರಾಹಿಂ ಅಂಬ್ಲಮೊಗರು, ಪದ್ಮನಾಭ ಕುಂಪಲ, ಮಹಾಬಲ ದೆಪ್ಪಲಿಮಾರ್, ಅಶ್ರಫ್ ಹರೇಕಳ, ಇಕ್ಬಾಲ್ ಹರೇಕಳ, DYFI ಜಿಲ್ಲಾ ನಾಯಕರಾದ ರಿಜ್ವಾನ್ ಹರೇಕಳ, ಅಮೀರ್ ಉಳ್ಳಾಲಬೈಲ್,ಅಸ್ಪಕ್ ಅಳೇಕಲ, ಶ್ರಾವಣ್ ಕುತ್ತಾರ್, ದೀಕ್ಷಿತ್ ಕುತ್ತಾರ್, ಸದಾಶಿವ ಕುತ್ತಾರ್, ನವೀನ್ ಗಿರಿಯಮೂಲೆ, ಚಂದ್ರಶೇಖರ್ ಪಿಲಾರ್, ಸುಂದರ ಪೂಜಾರಿ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.
