ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯಿಂದ ಜಿಲ್ಲೆಗೆ ಬೆಂಕಿ ಬಿದ್ದಿದೆ; ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ. ಹಕ್ಕೊತ್ತಾಯ ಸಭೆಯಲ್ಲಿ ಘರ್ಜನೆ

ಕರಾವಳಿ

ಕರ್ನಾಟಕ ಮುಸ್ಲಿಂ ಜಮಾಅತ್, SSF, SYS ಸಹಯೋಗದಲ್ಲಿ ಇಂದು ಮಂಗಳೂರಿನ ಕ್ಲಾಕ್ ಟವರ್ ಎದುರು ಜಲೀಲ್ ಹತ್ಯೆಯನ್ನು ಖಂಡಿಸಿ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಕತ್ತಿಯೇಟು ಬಿದ್ದಿದ್ದು ಜಲೀಲರಿಗಷ್ಟೇ ಅಲ್ಲ, ಈ ನಾಡಿನ ಕಾನೂನು ವ್ಯವಸ್ಥೆಯ ಮೇಲೆ ಪೊಲೀಸರ ತಾಕತ್ತಿನ ಮೇಲೆ ಧ್ಯೇಯವಾಕ್ಯದೊಂದಿದೆ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕೊಲೆ ರಾಜಕಾರಣದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ, ಸರಕಾರದ ವಿರುದ್ಧ ಹಕ್ಕೊತ್ತಾಯ ಸಭೆಯಲ್ಲಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದೌರ್ಜನ್ಯ ಆಗುತ್ತಿದೆ. ಇದು ಇಂದಿಗೆ ಕೊನೆಯಾಗಬೇಕು ಎಂಬ ಮಾತುಗಳು ಕೇಳಿ ಬಂದವು.

ನಾವೂರು ಯಾಕೂಬ್ ಸಹದಿ ಮಾತನಾಡುತ್ತಾ ಜಿಲ್ಲೆಯಲ್ಲಿ ನಿರಂತರವಾಗಿ ಮುಸ್ಲಿಂ ಸಮುದಾಯದ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಯಾರೂ ಕೇಳುವವರು ಇಲ್ಲದಂತಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಯ ಕ್ರಿಯೆಗೆ-ಪ್ರತಿಕ್ರಿಯೆ ಹೇಳಿಕೆಯಿಂದಾಗಿ ಜಿಲ್ಲೆಗೆ ಬೆಂಕಿ ಬಿದ್ದಂತಾಗಿದೆ. ಕೊಲೆ ಸರಣಿಗಳು ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯಲು ಮುಖ್ಯಮಂತ್ರಿ ಹೇಳಿಕೆಯೇ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಲೀಲ್ ಹತ್ಯೆಯ ದಿನ ಮುಖ್ಯಮಂತ್ರಿ ಜಿಲ್ಲೆಯ ಪ್ರವಾಸದಲ್ಲಿದ್ದರೂ ಕನಿಷ್ಠ ಪಕ್ಷ ಸಾಂತ್ವನ ಹೇಳದಿರುವುದು ರಾಜಧರ್ಮಕ್ಕೆ ಮಾಡಿದ ಅನ್ಯಾಯ ಎಂದು ಸಿದ್ದೀಕ್ ಮೊಂಟುಗೋಳಿ ಗುಡುಗಿದರು.

ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಹಲವಾರು ಪಕ್ಷದ ಮುಸ್ಲಿಂ ಮುಖಂಡರು ಸಾಮಾನ್ಯ ಕಾರ್ಯಕರ್ತರಂತೆ ಭಾಗವಹಿಸಿ ಗಮನ ಸೆಳೆದರು.