ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸಕ್ರಿಯ ರಾಜಕಾರಣಕ್ಕೆ,ಬಿಜೆಪಿ ಕಾನೂನು ಘಟಕದಲ್ಲಿ ಸ್ಥಾನ

ರಾಷ್ಟ್ರೀಯ

ವಿದೇಶಾಂಗ ವ್ಯವಹಾರ ಖಾತೆ ಮಾಜಿ ಸಚಿವೆ, ದಿ.ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ದೆಹಲಿಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕರನ್ನಾಗಿ ನೇಮಕ ಮಾಡುವ ಮೂಲಕ ಬಾನ್ಸುರಿ ರಾಜಕೀಯಕ್ಕೆ ಕಾಲಿಟ್ಟಂತಾಗಿದೆ.ಬಾನ್ಸುರಿ ಅವರು ಪ್ರಸ್ತುತ ಹರ್ಯಾಣದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾನ್ಸುರಿ ವಾರ್ವಿಕ್ ಯೂನಿರ್ವಸಿಟಿಯಲ್ಲಿ ಇಂಗ್ಲಿಷ್ ಲಿಟರೇಚರ್ (ಇಂಗ್ಲಿಷ್ ಸಾಹಿತ್ಯ)ನಲ್ಲಿ ಪದವಿ ಪಡೆದಿದ್ದು, ಲಂಡನ್ ನ ಬಿಪಿಪಿ ಲಾ ಸ್ಕೂಲ್ ನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಆಕ್ಸ್ ಫರ್ಡ್ ಯೂನಿರ್ವಸಿಟಿಯಲ್ಲಿ ಬ್ಯಾರಿಸ್ಟರ್ ಲಾ ಹಾಗೂ ಮಾಸ್ಟರ್ ಡಿಗ್ರಿ ಪದವಿ ಪಡೆದಿದ್ದಾರೆ. ಕಾನೂನು ಪದವಿ ಪಡೆದ ಬಾನ್ಸುರಿ, ರಿಯಲ್ ಎಸ್ಟೇಟ್, ತೆರಿಗೆ, ಅಂತಾರಾಷ್ಟ್ರೀಯ ವಾಣಿಜ್ಯ ಆರ್ ಬಿಟ್ರೇಶನ್ ಹಾಗೂ ಕ್ರಿಮಿನಲ್ ವ್ಯಾಜ್ಯಗಳ ಕುರಿತು ಕಾನೂನು ಸಮರ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.ಬಿಜೆಪಿ ಕಾನೂನು ಘಟಕದಲ್ಲಿ ಸ್ಥಾನ ನೀಡುವ ಮೂಲಕ ಪಕ್ಷದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕೆ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಾನ್ಸುರಿ ಸ್ವರಾಜ್ ತಿಳಿಸಿದ್ದಾರೆ.