ಸಿವಿಲ್ ಗುತ್ತಿಗೆದಾರರೊಬ್ಬರ ಹನಿಟ್ರ್ಯಾಪ್ ಪ್ರಕರಣ; ಮೂವರು ಆರೋಪಿಗಳ ಬಂಧನ

ರಾಜ್ಯ

ಚಿನ್ನದ ಚೈನ್, ಉಂಗುರ ಕಸಿದು, 27 ಸಾವಿರ ನಗದು, 8 ಸಾವಿರ ಗೂಗಲ್ ಪೇ ಮಾಡಿಸಿಕೊಂಡ ಆರೋಪಿಗಳು

ಗುತ್ತಿಗೆದಾರರೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಂತೋಷ್, ಅಜಯ್ ಹಾಗೂ ಜಯರಾಜ್ ಎಂದು ಗುರುತಿಸಲಾಗಿದೆ. ಸಿವಿಲ್ ಗುತ್ತಿಗೆದಾರರೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ನಯನಾ ಎಂಬಾಕೆ ಸೇರಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ.

ದೂರುದಾರ ಸಿವಿಲ್ ಕಂಟ್ರಾಕ್ಟರ್‌ಗೆ ಐದಾರು ತಿಂಗಳುಗಳ ಹಿಂದಷ್ಟೇ ಪರಿಚಯವಾಗಿದ್ದ ನಯನಾ ಆಗಾಗ ತನ್ನ ಮಗುವಿಗೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ಹೇಳಿ ಹಣ ಪಡೆದುಕೊಳ್ಳುತ್ತಿದ್ದಳು. ಅಲ್ಲದೇ ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರರು ಹೋಗಿರಲಿಲ್ಲ. ಆದರೆ ಡಿ.9 ರಂದು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, ನಮ್ಮ ಮನೆ ಸಮೀಪದಲ್ಲಿಯೇ ಇದೆ, ಟೀ ಕುಡಿದು ಹೋಗುವಿರಂತೆ ಬನ್ನಿ ಎಂದು ಒತ್ತಾಯಿಸಿದ್ದಾಳೆ. ಅದರಂತೆ ಆಕೆಯ ಮನೆಗೆ ಹೋಗಿದ್ದು, ಇಬ್ಬರು ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದಾಗ ಏಕಾಏಕಿ ಬಂದ ಮೂವರು ಆರೋಪಿಗಳು, ನಾವು ಸಿಸಿಬಿ ಪೊಲೀಸರು ಎನ್ನುತ್ತಾ ಬೆದರಿಸಿ, ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಎರಡು ಲಕ್ಷ ರೂ. ಕೊಡು ಇಲ್ಲದಿದ್ದರೆ, ನಿಮ್ಮಿಬ್ಬರ ಅಕ್ರಮ ಸಂಬಂಧದ ಕುರಿತು ನಿಮ್ಮ ಪತ್ನಿಗೆ ಹೇಳುತ್ತೇವೆ ಎಂದು ಬೆದರಿಸಿದ್ದರು.

ನಂತರ ದೂರುದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ ಬಿಚ್ಚಿಸಿಕೊಂಡಿದ್ದಾರೆ. ಅಲ್ಲದೇ 27,000 ಸಾವಿರ ರೂ. ನಗದು ಕಸಿದು ಮತ್ತು ಜತೆಗೆ 8 ಸಾವಿರ ಗೂಗಲ್ ಪೇ ಮಾಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು.

ಕೆಲ ಸಮಯದ ಬಳಿಕ ಆರೋಪಿಗಳನ್ನು ಹಿಂಬಾಲಿಸಿ ನಯನಾ ಕೂಡ ಹೋಗಿದ್ದಾಳೆ. ಈ ಬಗ್ಗೆ ಅನುಮಾನಗೊಂಡ ದೂರುದಾರ, ಆಕೆಗೆ ಕರೆ ಮಾಡಿ ಪೊಲೀಸರಿಗೆ ದೂರು ಕೊಡೋಣ ಬಾ ಎಂದು ಕರೆದಿದ್ದರು. ಆದರೆ ನೀವೇನಾದರೂ ದೂರು ಕೊಟ್ಟರೆ ಮಗುವಿನೊಂದಿಗೆ ನಿಮ್ಮ ಮನೆಗೆ ಬಂದು, ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯಾ ಎಂದು ನಿನ್ನ ಪತ್ನಿಗೆ ಹೇಳುತ್ತೇನೆ ಎಂದು ನಯನಾ ಬೆದರಿಸಿದ್ದಾಳೆ. ಇದರಿಂದಾಗಿ ಮರ್ಯಾದೆಗೆ ಅಂಜಿ ದೂರು ಕೊಡದೆ ಸುಮ್ಮನಾಗಿದ್ದಾರೆ.

ನಂತರದಲ್ಲಿ ತಾನು ಮಹಿಳೆಯ ಮಾತನ್ನು ನಂಬಿ ಮೋಸ ಹೋಗಿರುವುದನ್ನು ಅರಿತ ಸಿವಿಲ್ ಕಂಟ್ರಾಕ್ಟರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಗ್ಯಾಂಗ್​ ಸದಸ್ಯರ ನಡುವಿನ ಸಂಬಂಧಗಳ ತನಿಖೆ ನಡೆಸಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.