ಜಮೀನಿನ ಮೂಲ ದಾಖಲೆಗಾಗಿ ಹದಿನೈದು ವರ್ಷಗಳಿಂದ ಹೋರಾಟ ನಡೆಸುತ್ತಿರುವ ವಿಟ್ಲದ ಮಾಂಕು ಕೊರಗ..

ಕರಾವಳಿ

ಬಂಟ್ವಾಳ ತಾಲೂಕು ಕಛೇರಿಯ ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯಬೇಕೇ.?

ಅಗಸ್ಟ್ 15ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಜಮೀನಿನ ದಾಖಲೆಗಳ ಯಥಾಪ್ರತಿ ನೀಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ

ಹೌದು.. ಕಂದಾಯ ಇಲಾಖೆ ಎಂಬುದು ಅದ್ಯಾವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂಬುದಕ್ಕೆ ವಿಟ್ಲದ ಮಾಂಕು ಕೊರಗ ಎಂಬವರ ಹದಿನೈದು ವರ್ಷಗಳ ಹೋರಾಟವೇ ಸಾಕ್ಷಿಯಾಗಿದೆ. ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಲಪದವು ನಿವಾಸಿ ಮಾಂಕು ಕೊರಗ ಹಾಗೂ ಪತ್ನಿ ಹೆಸರಿಗೆ 2010ರಲ್ಲಿ ಅಂದಿನ ವಿಟ್ಲ ಕ್ಷೇತ್ರದ ಶಾಸಕ ಪದ್ಮನಾಭ ಕೊಟ್ಟಾರಿಯವರ ಶಿಫಾರಸ್ಸಿನಿಂದಾಗಿ ರಾಜ್ಯ ಸರ್ಕಾರದಿಂದ ಒಂದು ಎಕರೆ ಜಮೀನು ನೀಡಲಾಗಿತ್ತು. ಕೆಲ ತಿಂಗಳ ಬಳಿಕ ತನ್ನ ಜಮೀನಿನ ಗಡಿ ಗುರುತು ಮಾಡಿಸುವ ಸಲುವಾಗಿ ಮಾಂಕು ಕೊರಗರು ತನ್ನ ದಾಖಲೆಗಳ ಸಹಿತ ಬಂಟ್ವಾಳ ತಾಲೂಕು ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಕೆಲ ಸಮಯಗಳ ಬಳಿಕ ಕಛೇರಿಯಲ್ಲಿ ವಿಚಾರಿಸಿದಾಗ ಅರ್ಜಿ ಮಿಸ್ಸಿಂಗ್ ಆಗಿದೆ ಎಂಬ ಉತ್ತರ ಅಲ್ಲಿನ ಸಿಬ್ಬಂದಿಗಳು ಹೇಳಿದ್ದಾರೆಂದು ಮಾಂಕು ಕೊರಗ ತಿಳಿಸಿದ್ದಾರೆ.

ಇದಾದ ಬಳಿಕ ತಾಲೂಕು ಕಛೇರಿಯ ರೆಕಾರ್ಡ್ ವಿಭಾಗಕ್ಕೆ ತನ್ನ ಜಮೀನಿನ ಮೂಲ ದಾಖಲೆಗಳ ಯಥಾಪ್ರತಿ ನೀಡುವಂತೆ ಮಾಂಕು ಕೊರಗರು ಅರ್ಜಿ ಸಲ್ಲಿಸಿದ್ದರು. ಒಂದೆರಡು ವರ್ಷಗಳ ಕಾಲ ಪದೇ ಪದೇ ಸತಾಯಿಸುತ್ತಿದ್ದ ಕಛೇರಿಯ ಸಿಬ್ಬಂದಿಗಳು ಅದೊಂದು ದಿನ ನೀವು ಅರ್ಜಿಯಲ್ಲಿ ನಮೂದಿಸಿರುವ ಜಮೀನಿನ ಮೂಲ ದಾಖಲೆಗಳೇ ನಮ್ಮ ಕಛೇರಿಯಲ್ಲಿಲ್ಲ ಎಂಬ ಹಿಂಬರಹವನ್ನು ಅರ್ಜಿದಾರ ಮಾಂಕು ಕೊರಗರಿಗೆ ನೀಡಿದ್ದಾರೆ.

ತಾಲೂಕು ಕಛೇರಿಯ ಸಿಬ್ಬಂದಿಗಳ ತೀರಾ ಬೇಜವಾಬ್ದಾರಿ ವರ್ತನೆ ಮಾಂಕು ಕೊರಗರಿಗೆ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು.
ಅಂದಿನಿಂದ ಇಂದಿನ ವರೆಗೂ ಬಡ ಕುಟುಂಬದ ಮಾಂಕು ಕೊರಗರು ಗ್ರಾಮ ಆಡಳಿತಾಧಿಕಾರಿ ಕಛೇರಿಯಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ಕಳೆದ ಹದಿನೈದು ವರ್ಷಗಳ ಕಾಲ ಅರ್ಜಿ ನೀಡುತ್ತಲೇ ಬಂದಿದ್ದಾರೆ. ಆದರೂ ಜಮೀನಿನ ಮೂಲ ದಾಖಲೆಗಳ ಯಥಾಪ್ರತಿ ಇಂದಿನವರೆಗೂ ಮಾಂಕು ಕೊರಗರಿಗೆ ಕಂದಾಯ ಇಲಾಖೆ ನೀಡಿಲ್ಲವಾಗಿದೆ.

ಇದೀಗ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಹೈರಾಣಾದ ಮಾಂಕು ಕೊರಗರು ಇದೇ ತಿಂಗಳ ಅಗಸ್ಟ್ 15ರಂದು ಬೆಳಗ್ಗೆ ದ.ಕ.ಜಿಲ್ಲಾಧಿಕಾರಿ ಕಛೇರಿ ಮುಂದೆ ತನ್ನ ಜಮೀನಿನ ಮೂಲ ದಾಖಲೆಗಳ ಯಥಾಪ್ರತಿ ನೀಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಪ್ರತಿಭಟನೆ ಮಾಡುತ್ತೇನೆಂದು ಕಣ್ಣೀರಿಟ್ಟು ಹೇಳಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಬಡ ದಲಿತ ಕುಟುಂಬದ ಮಾಂಕು ಕೊರಗರಿಗೆ ಜಮೀನಿನ ಮೂಲ ದಾಖಲೆಗಳ ಯಥಾಪ್ರತಿ ನೀಡಬೇಕು ಹಾಗೂ ಬಂಟ್ವಾಳ ತಾಲೂಕು ಕಛೇರಿಯಲ್ಲಿನ ಕಡತ ನಾಪತ್ತೆಯಾಗಲು ಕಾರಣನಾದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ.