ಅಸುರಕ್ಷಿತ ನಡೆನುಡಿಗೆ ಒಳಗಾಗಿ 22 ವರ್ಷ ಒಳಗಿನ ಯುವ ಜನತೆ ಎಚ್‌ಐವಿ ಬಲೆಗೆ ಬೀಳುತ್ತಿದ್ದಾರೆ
ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ತಾಲೂಕಿನಲ್ಲಿ 2025ನೇ ಸಾಲಿನ ಶೇ.66.33 ರಷ್ಟು ಪ್ರಕರಣದಲ್ಲಿ ಯುವ ಜನತೆಯಲ್ಲೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಇದರಲ್ಲಿ 22 ವರ್ಷದ ಒಳಗಿನ ವಯಸ್ಸಿನ ಯುವ ಜನತೆ ಎನ್ನುವುದು ವಿಶೇಷವಾಗಿ ಗಮನ ಸೆಳೆದಿದೆ. ಅಂಕೋಲಾ ತಾಲೂಕಿನಲ್ಲಿ ಒಟ್ಟು 210 ಎಚ್‌ಐವಿ ಸೋಂಕಿತರಿದ್ದು, ಅದರಲ್ಲಿ 106 ಗಂಡು ಹಾಗೂ 104 ಮಹಿಳೆಯರಲ್ಲಿ ಎಚ್‌ಐವಿ ಇದ್ದು, ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸುರಕ್ಷಿತ ನಡೆನುಡಿಗೆ ಒಳಗಾಗಿ ಎಚ್‌ಐವಿ ಬಲೆಗೆ ಬೀಳುತ್ತಿದ್ದಾರೆ ಎಂದು ವೈದ್ಯರೆ ಸ್ಪಷ್ಟಪಡಿಸುತ್ತಾರೆ. ಇದರಲ್ಲಿ 22 ವಯಸ್ಸಿನೊಳಗಿನವರೆ ಹೆಚ್ಚಾಗಿದ್ದು ಆತಂಕಕಾರಿ ಸಂಗತಿಯಾಗಿದೆ. ಪ್ರತಿವರ್ಷ ಸೋಂಕಿತರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚು ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ. ಕಳೆದ ಎರಡು ವರ್ಷಗಳ ವರದಿಯ ಪ್ರಕಾರ ಶೇ.10ರಷ್ಟು ಎಚ್‌ಐವಿ ಸೋಂಕಿತರು ಸಲಿಂಗಕಾಮಿಗಳು ಇರುವುದು ಕೂಡ ದಾಖಲಾಗಿದೆ. ಈ ಅಂಕಿ-ಅಂಶಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿರುವುದು ಕೂಡ ಆರೋಗ್ಯ ಇಲಾಖೆಗೆ ಇನ್ನೊಂದು ಸವಾಲಾಗಿದೆ. ಇದರಲ್ಲಿ ಹೆಚ್ಚಾಗಿ ಸುಶಿಕ್ಷಿತರೆ ಹೆಚ್ಚಾಗಿ ಇರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.
ಯುವ ಜನತೆಯಲ್ಲೆ ಹೆಚ್ಚಾಗಿ ಎಚ್‌ಐವಿ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ವಿದ್ಯಮಾನವನ್ನು ಗಂಭೀರವಾಗಿ ತೆಗೆದುಕೊಂಡು ಶಾಲೆ ಕಾಲೇಜುಗಳಿಗೆ ತೆರಳಿ ಜಾಗೃತಿ ಆಂದೋಲನ ಹಾಗೂ ವಿವಿಧ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಗತ್ಯವಿದೆ. ಏಡ್ಸ್ ನಿಯಂತ್ರಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು, ಅವರು ಜಾಗೃತಿ ಮೂಡಿಸುವುದು, ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚುವುದು, ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ನೀಡುವುದು, ಕಳಂಕ ತೊಲಗಿಸಲು ಮುಂದಾಗುವುದು, ಸುರಕ್ಷಿತ ಲೈಂಗಿಕ ಜೀವನದ ಬಗ್ಗೆ ತಿಳಿಸುವುದು ಮತ್ತು ಸೋಂಕಿತರಿಗೆ ಬೆಂಬಲ ನೀಡುವುದರ ಮೂಲಕ ಏಡ್ಸ್ ಮಹಾಮಾರಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯುವಕರು ಎಚ್ಐವಿ ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯದಲ್ಲಿರುವುದರಿಂದ, ಅವರ ಪಾಲ್ಗೊಳ್ಳುವಿಕೆ ಅತ್ಯಗತ್ಯ.
