‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನಲಾಗುತ್ತಿದೆ. ಇದೆಲ್ಲ ಈಗ ಮರೀಚಿಕೆಯಾಗಿಬಿಟ್ಟಿದೆ. ಜನರಿಗೆ ಸೇವೆ ನೀಡಲು ಸರಕಾರಿ ಕೆಲಸಕ್ಕೆ ಸೇರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಎಷ್ಟು ಸಿಗುತ್ತೋ ಅಷ್ಟು ಬಾಚಿ ತಿನ್ನುವುದನ್ನೇ ಸರಕಾರಿ ಕೆಲಸ ಅಂದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜನಸಾಮಾನ್ಯರು ಕೆಲಸಕ್ಕಾಗಿ ಸರಕಾರಿ ಕಚೇರಿಗೆ ಬಂದರೆ ಅಲೆದಾಡುವುದೇ ಆಗಿ ಬಿಟ್ಟಿದೆ. ಅದರಲ್ಲೂ ಮಂಗಳೂರಿನ ಮಿನಿ ವಿಧಾನಸೌಧ, ಬಂಟ್ವಾಳದ ಮಿನಿ ವಿಧಾನಸೌಧದ ಕಥೆಯೇ ಖರಾಬ್ ಆಗಿ ಬಿಟ್ಟಿದೆ.
ಬಂಟ್ವಾಳ ಮಿನಿ ವಿಧಾನಸೌಧದ ಖದರ್ರೆ ಕರಕಲಾಗಿದೆ. ಇಲ್ಲಿನ ಮಿನಿ ವಿಧಾನಸೌಧದ ಹಣೆಬರಹದ ಬಗ್ಗೆ ಪತ್ರಿಕೆ ಹಲವು ಬಾರಿ ವರದಿಯನ್ನು ಮಾಡಿದೆ. ಪತ್ರಿಕೆ ವರದಿ ನಂತರ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ದಾಳಿ ನಡೆಸಿ ಹಲವು ತಿಮಿಂಗಿಲಗಳನ್ನು ಬೇಟೆಯಾಡಿದೆ. ಆದರೆ ಬಂಟ್ವಾಳ ಮಿನಿ ವಿಧಾನಸೌಧ ಇನ್ನೂ ಬದಲಾದಂತೆ ಕಾಣುತ್ತಿಲ್ಲ.
ಬಂಟ್ವಾಳ ಮಿನಿ ವಿಧಾನಸೌಧದ ಚಿತ್ರಣವನ್ನೊಮ್ಮೆ ನೋಡಿ. ಇಲ್ಲಿ ತಹಶೀಲ್ದಾರರು ಬದಲಾಗುತ್ತಾ ಹೋದರೂ, ಆಯಕಟ್ಟಿನ ಜಾಗದಲ್ಲಿ ಕೂತ ಆಧಿಕಾರಿಗಳ ಎತ್ತಂಗಡಿ ಆಗುತ್ತಿಲ್ಲ. ಇಲ್ಲಿ ಕುರ್ಚಿಗೆ ಫೆವಿಕಲ್ ಹಾಕಿ ಕೂತಿದ್ದಾರೆ. ಇಲ್ಲಿನ ಕಂದಾಯ ಇಲಾಖೆ, ಭೂ ಮಾಪನ ಇಲಾಖೆ, ಸರ್ವೇಯರ್ ಗಳು 10-15 ವರ್ಷಗಳಿಂದ ಇಲ್ಲಿಯೇ ಝಂಡಾ ಊರಿ ಕುಳಿತಿದ್ದಾರೆ. ನುಂಗುವುದನ್ನೇ ಡ್ಯೂಟಿ ಅಂದುಕೊಂಡಿದ್ದಾರೆ. ಯಾವುದೇ ಸರಕಾರ ಬಂದರೂ ಇಲ್ಲಿನ ಅಧಿಕಾರಿಗಳ ವರ್ಗಾವಣೆಯಾಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷದ ನಾಯಕರೊಂದಿಗೆ ಅಡ್ಜೆಸ್ಟ್ ಮೆಂಟ್ ಹೊಂದಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಕೇವಲ ತಹಶೀಲ್ದಾರ್ ವರ್ಗಾವಣೆ ಮಾಡಿದರೆ ಸಾಲದು, ಇಲ್ಲಿ ಕುರ್ಚಿಗೆ ಫೆವಿಕಲ್ ಗಮ್ ಹಾಕಿ ಕೂತಿರುವ ಅಧಿಕಾರಿಗಳನ್ನು ಬಧಲಾಯಿಸದ ಹೊರತು ಜನಪರವಾಗಲು ಸಾಧ್ಯವೇ ಇಲ್ಲ.
ಇನ್ನು ಮಂಗಳೂರು ಮಿನಿ ವಿಧಾನಸೌಧದ ಕಥೆ ಹೇಳಿ ಪ್ರಯೋಜನವಿಲ್ಲ. ಇಲ್ಲಿ ಅಧಿಕಾರಿಗಳದ್ದೇ ದರ್ಬಾರ್. ಕೇಳೋರಿಲ್ಲ.. ಕೇಳೋರಿಲ್ಲ.. ಇವರು ಆಡಿದ್ದೇ ಆಟ ಅನ್ನುವಂತಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಝಂಡಾ ಹೂಡಿರುವ ಕೆಲವು ಅಧಿಕಾರಿಗಳು ‘ಅಳಿದುಳಿದ ಊರಿಗೆ ಉಳಿದೋನೆ ಅರಸ’ ಅನ್ನುವಂತೆ ಮಂಗಳೂರು ಆಡಳಿತ ಸೌಧದಲ್ಲಿ ರಾಜ ದರ್ಬಾರ್ ನಡೆಸುತ್ತಿದ್ದಾರೆ. ಲಂಚ ಕೊಡದೆ ಇವರು ಕೆಲಸನೇ ಮಾಡಲ್ವಂತೆ. ಸಾರ್ವಜನಿಕರನ್ನು ಸತಾಯಿಸುವುದೆಂದರೆ ಇವರಿಗೆ ಬಹಳಷ್ಟು ಸಂತೋಷ. ಬ್ರೋಕರ್ ಮುಖಾಂತರ ಫೈಲ್ ಬಂದರೆ ಕೆಲಸ ಸಲೀಸು. ಇಲ್ಲವಾದರೆ ಇವರ ಕಚೇರಿಯಲ್ಲಿಯೇ ಫೈಲ್ ಮೂವ್ ಆಗುವುದೇ ಇಲ್ಲ. ದಿನಕ್ಕೊಂದು ಕಾನೂನು ತಂದು ಜನರನ್ನು ಸತಾಯಿಸುತ್ತಿದ್ದಾರೆ.
ಇನ್ನು ವಿಚಿತ್ರ ಅಂದರೆ ಲೋಕಾಯುಕ್ತ ದಾಳಿಯಲ್ಲಿ ಜೈಲು ಸೇರಿದ ಅಧಿಕಾರಿಗಳು ಮತ್ತೆ ಇಲ್ಲಿಯೇ ಬಂದು ವಕ್ಕರಿಸಿದ್ದಾರೆ. ಯಾವ ಪುರುಷಾರ್ಥಕ್ಕೆ ಲೋಕಾಯುಕ್ತ ದಾಳಿ. ಇನ್ನಾದರೂ ಇಲ್ಲಿನ ಅಧಿಕಾರಿಗಳಿಗೆ ಅಂಕುಶ ಹಾಕುವ ಕೆಲಸ ಜರೂರು ಆಗಬೇಕಿದೆ.
