2028 ರ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿದ್ದರಾ ಯತ್ನಾಳ್.?

ರಾಜ್ಯ

ಹಿಂದುತ್ವದ ಫೈರ್ ಬ್ರ್ಯಾಂಡ್ ಕಟ್ಟುತ್ತಾರಂತೆ ಹೊಸ ಪ್ರಾದೇಶಿಕ ಪಕ್ಷ..ಧರ್ಮ ಸಂಕಟದಲ್ಲಿ ಬಿಜೆಪಿ ಹೈಕಮಾಂಡ್.!

ಹಿಂದೂತ್ವದ ಫೈರ್ ಬ್ರ್ಯಾಂಡ್ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಾಲಿಗೆ ಭಸ್ಮಾಸುರರಾಗಿ ರೂಪಾಂತರಗೊಂಡಿದ್ದಾರೆ. ಯತ್ನಾಳ್ ತಂಡದ ಭಿನ್ನಮತಕ್ಕೆ ಕುಮ್ಮಕ್ಕು ಕೊಟ್ಟ ಬಿಜೆಪಿ ಪ್ರಭಾವಿಗಳೇ ಶೇಕ್ ಆಗಿದ್ದಾರೆ. ಅದಕ್ಕೆ ಕಾರಣ ಯತ್ನಾಳ್ ಪ್ರಾದೇಶಿಕ ಪಕ್ಷ ಕಟ್ಟುತ್ತಾರೆ ಅನ್ನುವ ಸುದ್ದಿ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವವನ್ನು ಕುಗ್ಗಿಸಲು ಯತ್ನಾಳ್ ಆಂಡ್ ಟೀಮನ್ನು ಬಿಜೆಪಿಯ ಕೆಲವು ಪ್ರಭಾವಶಾಲಿಗಳೇ ಮುನ್ನೆಲೆಗೆ ತಂದಿದ್ದರು. ಸಂಘಪರಿವಾರ ಕೂಡ ಪರೋಕ್ಷವಾಗಿ ಯತ್ನಾಳ್ ಬೆನ್ನಿಗೆ ನಿಂತಿತ್ತು. ಬಿಜೆಪಿಯ ಕೆಲವು ಗುಂಪುಗಳಿಗೆ ಇದ್ದಿದ್ದು ಪಕ್ಷದಲ್ಲಿ ಯಡಿಯೂರಪ್ಪ ಪ್ರಭಾವ ಕುಗ್ಗಿಸುವುದೇ ಆಗಿತ್ತು. ಆದರೆ ಈ ಪ್ರಯತ್ನ ಕೂಡ ಫಲ ಕಂಡಿಲ್ಲ. ಇದೀಗ ಬೆನ್ನಿಗೆ ನಿಂತವರ ಬುಡಕ್ಕೆ ಯತ್ನಾಳ್ ಬೆಂಕಿ ಹಚ್ಚಿದ್ದಾರೆ. ಬಿಜೆಪಿ ಹೈಕಮಾಂಡ್ ತನ್ನ ವಿರುದ್ಧ ಕ್ರಮ ಕೈಗೊಂಡರೆ ಹೊಸ ಪ್ರಾದೇಶಿಕ ಪಕ್ಷ ರಚಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕ ಆಗುವ ಪ್ರತಿಜ್ಞೆ ಮಾಡಿದ್ದಾರಂತೆ.

ಅಷ್ಟಕ್ಕೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದವರ ಭವಿಷ್ಯವೇನೂ ಉಜ್ವಲವಾದ ಇತಿಹಾಸ ಇಲ್ಲ. ಆದರೆ ತಮ್ಮ ವಿರೋಧಿಗಳನ್ನು ಮಣ್ಣು ಮುಕ್ಕಿಸಿದ ಇತಿಹಾಸವಂತೂ ಖಂಡಿತ ಇದೆ.

ಯಡಿಯೂರಪ್ಪ ರಂತಹ ಲಿಂಗಾಯತ ಮಾಸ್ ಲೀಡರ್ ಕೆಜೆಪಿ ಕಟ್ಟಿ ಕೊನೆಗೆ ನೆಲೆ ಕಾಣದೆ ವಾಪಾಸು ಬಿಜೆಪಿ ಸೇರಿಕೊಂಡರು. ಬಳ್ಳಾರಿ ರಿಪಬ್ಲಿಕ್ ಆಗಿ ಘೋಷಿಸಿದ್ದ ಗಣಿ ಧಣಿ ರೆಡ್ಡಿ -ರಾಮುಲು ಜೋಡಿ ಬಿ.ಆರ್.ಎಸ್ ಕಾಂಗ್ರೆಸ್ ಪಕ್ಷ ಕಟ್ಟಿದರೂ ಹೆಚ್ಚು ಸಮಯ ಉಳಿಯಲಿಲ್ಲ. ಬಂಗಾರಪ್ಪನವರ ಕೆಸಿಪಿಗೂ ಇದೇ ಗತಿಯಾಯ್ತು. ಇನ್ನು ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಕಾಣುವುದು ಕೂಡ ಅಸಾಧ್ಯ.

ಇದೀಗ ಪಕ್ಷ ತನ್ನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದರೆ ಅಥವಾ ವಿಜೆಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹಿಂದೇಟು ಹಾಕಿದರೆ ತಾನು ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಿ ಸೆಡ್ಡು ಹೊಡೆಯುವುದಾಗಿ ಯತ್ನಾಳ್ ಬಾಂಬ್ ಸಿಡಿಸಿರುವುದು ಬಿಜೆಪಿಯಲ್ಲೇ ಕೋಲಾಹಲವೆಬ್ಬಿಸಿದೆ. ಬಿಜೆಪಿಯಲ್ಲಾಗುತ್ತಿರುವ ಬಣ ಬಡಿದಾಟ ಬೇರೆಯದೇ ದಾರಿ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಸಂಘಪರಿವಾರದ ಮುಖಂಡರು ಕೂಡ ಯತ್ನಾಳ್ ಜೊತೆಗೆ ರಾಜಿ ಸಂಧಾನ ನಡೆಸುತ್ತಿದ್ದಾರೆ ಅನ್ನುವ ಸುದ್ಧಿ ಇದೆ. ಆದರೆ ಇದು ಫಲಪ್ರದಗೊಂಡಿಲ್ಲ ಅನ್ನುವ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.

ಯತ್ನಾಳ್ ಪ್ರಾದೇಶಿಕ ಪಕ್ಷ ಕಟ್ಟಿದರೆ ಗಮನಾರ್ಹ ಸಾಧನೆ ಮಾಡುತ್ತಾರೆ, ಅಧಿಕಾರದ ಗದ್ದುಗೆ ಪಡೆಯಲು ಕಿಂಗ್ ಮೇಕರ್ ಆಗುತ್ತಾರೆ ಅನ್ನುವ ನಿರೀಕ್ಷೆಯಂತೂ ಯಾರಿಗೂ ಇಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಯತ್ನಾಳ್ ಖಂಡಿತ ಅಡ್ಡಗಾಲು ಹಾಕಬಲ್ಲರು. 1994 ರಲ್ಲಿ ಕಾಂಗ್ರೆಸ್ ನಿಂದ ಹೊರಬಂದು ಕೆಸಿಪಿ ಕಟ್ಟಿದ ಬಂಗಾರಪ್ಪ 218 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಬರೀ ಹತ್ತು ಸೀಟು ಪಡೆದಿದ್ದರು. ಆದರೆ 143 ಸ್ಥಾನ ಪಡೆದಿದ್ದ ಕಾಂಗ್ರೆಸ್ 34 ಸ್ಥಾನಕ್ಕೆ ಕುಸಿದು ಹೀನಾಯ ಸೋಲಿಗೆ ಕಾರಣವಾಗಿತ್ತು. ಕಾಂಗ್ರೆಸ್ ಸೋಲಿಗೆ ಕೆಸಿಪಿ ಎಫೆಕ್ಟ್ ಕಾರಣವಾಗಿತ್ತು. 2013 ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಕೂಡ ಬಿಜೆಪಿಗೆ ಇಂತಹದ್ದೇ ಹೀನಾಯ ಸ್ಥಿತಿ ತಂದಿದ್ದರು. ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ 06 ಸ್ಥಾನ ಪಡೆದಿದ್ದರೂ ಬಿಜೆಪಿ 102 ಸ್ಥಾನದಿಂದ 40 ಸ್ಥಾನಕ್ಕೆ ಕುಸಿದಿತ್ತು. ರೆಡ್ಡಿ -ರಾಮುಲು ಕೂಡ ಬಿಎಸ ಆರ್ ಪಾರ್ಟಿ ಕಟ್ಟಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು. ಈ ಎಲ್ಲಾ ಹೊಡೆತ ಬಿಜೆಪಿಯನ್ನು ತತ್ತರಿಸುವಂತೆ ಮಾಡಿತ್ತು. ಪ್ರಾದೇಶಿಕ ಪಕ್ಷಗಳು ತಾವು ಗೆಲ್ಲದೆ ಹೋದರೂ ತಮ್ಮ ಮಾತೃ ಪಕ್ಷಗಳನ್ನು ಮಕಾಡೆ ಮಲಗಿಸುವ ತಾಕತ್ತು ಹೊಂದಿದೆ.

2028 ರ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಫೀನಿಕ್ಸ್ ನಂತೆ ಎದ್ದು ಸರಕಾರ ನಡೆಸುವ ಹುಮ್ಮಸ್ಸಿನಲ್ಲಿದ್ದರೆ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ಬಡಿದಾಟ ಆತಂಕ ಮೂಡಿಸಿದೆ. ಅದರಲ್ಲೂ ಯತ್ನಾಳ್ ಬಣ ಬಹಿರಂಗವಾಗಿ ಬಿಜೆಪಿ ನಾಯಕರ ವಿರುದ್ಧವೇ ಸಮರ ಸಾರುತ್ತಿರುವುದೂ, ಮುಂದಿನ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಿ ಕಣಕ್ಕಿಳಿದರೆ ಬಿಜೆಪಿಯ ಅಧಿಕಾರದ ಕನಸಂತೂ ನನಸಾಗಲು ಸಾಧ್ಯವಿಲ್ಲ.

ಯತ್ನಾಳ್ ಹೇಳಿ ಕೇಳಿ ಹಿಂದೂತ್ವದ ಫೈರ್ ಬ್ರ್ಯಾಂಡ್. ಲಿಂಗಾಯತ ನಾಯಕರೇ ಹೆಚ್ಚಾಗಿ ಯತ್ನಾಳ್ ಬೆನ್ನಿಗಿದ್ದಾರೆ. ಬಿಜೆಪಿಯಿಂದ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ, ಬಸವರಾಜು ಬೊಮ್ಮಾಯಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಪ್ರತಾಪಸಿಂಹ, ನಳಿನ್ ಕುಮಾರ್ ಕಟೀಲ್ ರಂತಹ ನಾಯಕರೇ ಉಲ್ಟಾ ಹೊಡೆದರೆ ಪಕ್ಷದ ಗತಿಯೇನು ಅನ್ನುವ ಚಿಂತೆಯಲ್ಲಿ ಬಿಜೆಪಿ -ಸಂಘಪರಿವಾರದ ನಾಯಕರಿದ್ದಾರೆ. ಹಿಂದೂತ್ವದ ಟ್ರಂಪ್ ಕಾರ್ಡನ್ನೇ ಬಳಸಿಕೊಂಡು ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆ ಇದೆ. ಒಟ್ಟಾರೆ ಧರ್ಮ ಸಂಕಟಕ್ಕೆ ಬಿಜೆಪಿ ಹೈಕಮಾಂಡ್ ಸಿಲುಕಿದೆ.