ಉಡುಪಿ ಜಿಲ್ಲೆಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಪುರಾಣ ಒಂದೊಂದಾಗಿ ಬಯಲಿಗೆ ಬರುತ್ತಲೇ ಇದೆ. ಈ ಹಿಂದೆ ಇದೇ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿದ್ದ ಡಾ ಅಶೋಕ್ ಎಂಬಾತ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದರು. ಆದರೆ ಇದೀಗ ಇಲ್ಲಿನ ವೈದ್ಯ ಗುರುದತ್ ಎಂಬಾತ ದಲಿತ ಮುಖಂಡನಿಗೆ ಚಿಕಿತ್ಸೆ ನಿರಾಕರಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಉಡುಪಿ ನಗರದ ನಿಟ್ಟೂರು ಸಮೀಪದ ಕೊಡಂಕೂರು ಎಂಬಲ್ಲಿ ದಲಿತ ಮುಖಂಡ ಮುರಳಿಯವರ ಮೇಲೆ ಹಲ್ಲೆ ಯತ್ನ ನಡೆದಿತ್ತು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯ ಗುರುದತ್ ಚಿಕಿತ್ಸೆ ನೀಡಲು ನಿರಾಕರಿಸಿದ್ದು ಈ ಸಂಬಂಧ ದಲಿತ ಸಂಘಟನೆ ಸಿಡಿದೆದ್ದಿದೆ . ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯ ಗುರುದತ್ತ್ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಿ ವಜಾಗೊಳಿಸುವಂತೆ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅನಾಮಿಕರು ಬಾಲಕನೊಬ್ಬನಿಗೆ ಕಾರಿನೊಳಗೆ ಹಲ್ಲೆ ನಡೆಸುತ್ತಿದ್ದುದನ್ನು ಖಂಡಿಸಿ, “ಯಾವುದೇ ಅನ್ಯಾಯವಾಗಿದ್ದರೆ ಪೊಲೀಸರಿಗೆ ದೂರು ನೀಡಿ” ಎಂದು ಹೇಳಿದ್ದಕ್ಕೆ ಕಾರಿನಲ್ಲಿದ್ದ ನಾಲ್ವರು ಹೊರಬಂದು ದಲಿತ ಮುಖಂಡ ಮುರಳಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ಮುರಳಿಯವರನ್ನು ಸ್ಥಳೀಯರು ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಾಗ, “ಮದ್ದು ಕೊಡುತ್ತೇನೆ, ದಾಖಲಿಸುವುದಿಲ್ಲ. ನನಗೆ ನ್ಯಾಯಾಲಯಕ್ಕೆ ಹೋಗುವ ಕೆಲಸವಲ್ಲ” ಎಂದು ವೈದ್ಯ ಗುರುದತ್ತ್ ಉಡಾಫೆಯಾಗಿ ವರ್ತಿಸಿ, ಎಂಎಲ್ಸಿ ಮಾಡಿ ವಾಪಸ್ ಕಳುಹಿಸಿದ್ದಾರೆ ಎಂದು ಅಂಬೇಡ್ಕರ್ ಯುವಸೇನೆ ಆರೋಪಿಸಿದೆ.
ಈ ವಿಚಾರವನ್ನು ಪ್ರಶ್ನಿಸಿದ ಸಂಘಟನೆಯ ಮುಖಂಡರೊಂದಿಗೂ ವೈದ್ಯರು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಜನಸಾಮಾನ್ಯರಿಗೆ ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಬೇಕಾದ ವೈದ್ಯರು ಪಾನಮತ್ತರಂತೆ ವರ್ತಿಸಿರುವುದು ಖಂಡನೀಯವಾಗಿದ್ದು, ವೈದ್ಯಕೀಯ ವೃತ್ತಿಗೆ ಅಪಚಾರ ಎಸಗಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಯುವಸೇನೆ ಒತ್ತಾಯಿಸಿದೆ.
ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಆಗಿದ್ದ ಡಾ. ಅಶೋಕ್ 2018 ರಲ್ಲಿ ಮಂಗಳೂರಿನಲ್ಲಿ ಆರ್ ಸಿ ಹೆಚ್ ಅಧಿಕಾರಿಯಾಗಿದ್ದ ಡಾ. ಅಶೋಕ್ ಎಚ್ ಇಲಾಖೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆಂತರಿಕ ಸಮಿತಿ ನಡೆಸಿದ ತನಿಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಧಿಕಾರಿಗೆ ದಂಡನೆ ಕೂಡ ವಿಧಿಸಲಾಗಿತ್ತು.
ಡಿಎಚ್ಒ ಇತ್ತ ಗಮನಹರಿಸಲಿ
ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿರಂತರವಾಗಿ ಒಂದಿಲ್ಲೊಂದು ಪ್ರಕರಣ ಹೊರಬರುತ್ತಿದೆ. ಜನಸಾಮಾನ್ಯರಿಗೆ ಉತ್ತಮವಾಗಿ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯ ಒಂದೊಂದು ಕರ್ಮಕಾಂಡ ಗಳು ಹೊರಬರುತ್ತಿದೆ. ಈ ಬಗ್ಗೆ ಹದ್ದಿನ ಕಣ್ಣು ಇಡಬೇಕಾಗಿದೆ.
