ಜಾತ್ಯತೀತ ಪಕ್ಷ ಬಿಟ್ಟು ಬಿಜೆಪಿ ಸೇರಿ ‘ಕಟ್ಟರ್ ಹಿಂದುತ್ವ ನಾಯಕ’ರಾದರು; ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕರೇ ಮುಖ್ಯಮಂತ್ರಿಗಳು

ರಾಷ್ಟ್ರೀಯ

ನೀವು ನಂಬಿದರೆ ನಂಬಿ, ಇಲ್ಲದಿದ್ದರೆ ಬಿಡಿ. ಕಾಂಗ್ರೆಸ್ ಆದಿಯಾಗಿ ಜಾತ್ಯತೀತ ಪಕ್ಷದಲ್ಲಿ ನಾಯಕರಾಗಿ ಗುರುತಿಸಿ ಬಿಜೆಪಿ ಸೇರಿದ ಬಹುತೇಕ ನಾಯಕರು ಇಂದು ರಾಜಕಾರಣದಲ್ಲಿ ಕಟ್ಟರ್ ಹಿಂದುತ್ವ ನಾಯಕರಾಗಿ ಮಿಂಚುತ್ತಿದ್ದಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು.

ಬಹುನಿರೀಕ್ಷಿತ ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಕಮಲ ಕಮಾಲ್ ಮಾಡಿದೆ. ಕೇರಳದಲ್ಲಿ ಎಡಪಕ್ಷಗಳ ಆಟ ಮುಕ್ತಾಯವಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಗಳಿಸಿದೆ. ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಿದ ಎರಡೇ ವರ್ಷದಲ್ಲಿ ಜೋಸೆಫ್ ವಿಜಯ್ ರ ಟಿವಿಕೆ ಅಧಿಕಾರಕ್ಕೇರಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿಯ ಹದಿನೈದು ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಬಿಜೆಪಿಗೆ ದೊಡ್ಡ ಯಶಸ್ಸು ಲಭಿಸಿದೆ.

ವಿಷಯ ಅದಲ್ಲ. ಬಿಜೆಪಿ ಇಂದು ಹದಿನೇಳು ಮಿಕ್ಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟದ ಪಕ್ಷಗಳು ಅಧಿಕಾರ ನಡೆಸುತ್ತಿದೆ. ಆದರೆ ಅದರಲ್ಲಿ ಹೆಚ್ಚು ಕಮ್ಮಿ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕರೇ ಮುಖ್ಯಮಂತ್ರಿಗಳಾಗಿದ್ದಾರೆ. ಮೂಲತಃ ಕಾಂಗ್ರೆಸ್ಸಿಗರು, ಆದರೆ ಇದೀಗ ಬಿಜೆಪಿ ಮುಖ್ಯಮಂತ್ರಿಗಳು.

ಪುದುಚೇರಿ ಸಿಎಂ ಎನ್ ರಂಗಸ್ವಾಮಿ ಮೂಲತಃ ಕಾಂಗ್ರೆಸ್ಸಿಗರು. ಮೊನ್ನೆ ನಡೆದ ಚುನಾವಣೆಯಲ್ಲಿ ಮತ್ತೆ ಜಯಭೇರಿ ಗಳಿಸಿದ್ದಾರೆ. ಆದರೆ ಈಗ ಅವರದ್ದು ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ. ಭಾರೀ ಸದ್ದು ಮಾಡಿದ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸಿ ದೀದಿ ಯುಗಾಂತ್ಯಕ್ಕೆ ಕಾರಣವಾದ ಬಂಗಾಳದ ದಾದ ಸುವೇಂದು ಅಧಿಕಾರಿ ಮೂಲತಃ ಕಾಂಗ್ರೆಸ್ಸಿಗರು. ಆನಂತರ ತೃಣಮೂಲ ಕಾಂಗ್ರೆಸ್ ಸೇರಿ ಮಮತಾ ಬ್ಯಾನರ್ಜಿ ಯ ರೈಟ್ ಹ್ಯಾಂಡ್ ಆಗಿದ್ದರು. ಅಲ್ಲಿಂದ ಬಿಜೆಪಿ ತೆಕ್ಕೆಗೆ ಬಂದು ದೀದಿ ಕೋಟೆ ಪುಡಿ ಮಾಡಿ ಇದೀಗ ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಇನ್ನು ಅಸ್ಸಾಂ ನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ರೂವಾರಿ ಹೀಮಂತ್ ಬಿಸ್ವಾಸ್ ಶರ್ಮಾ ಕೂಡ ಮೂಲತಃ ಕಾಂಗ್ರೆಸ್ಸಿಗರು. ಆಲ್ಲಿ ತರುಣ್ ಗೋಗೋಯ್ ವಿರುದ್ಧ ಸಿಡಿದು ನಿಂತು ಬಿಜೆಪಿ ಸೇರಿದ್ದರು. ಇನ್ನು ಬಿಹಾರದಲ್ಲಿ ಮುಖ್ಯಮಂತ್ರಿ ಆಗಿರುವ ಸಾಮ್ರಾಟ್ ಚೌಧರಿ ಕೂಡ ಮೂಲತಃ ಕಾಂಗ್ರೆಸ್ಸಿಗರು. ಕಾಂಗ್ರೆಸ್ ಪಕ್ಷದಿಂದ ಆಪರೇಷನ್ ಮಾಡಿಸಿ ಎರವಲು ಪಡೆದ ನಾಯಕರೇ ಇಂದು ಬಿಜೆಪಿಯಿಂದ ಬಹುತೇಕ ರಾಜ್ಯಗಳಲ್ಲಿ ರಾಜ್ಯಭಾರ ನಡೆಸುತ್ತಿದ್ದಾರೆ. ಇದು ಅಚ್ಚರಿ ಆದರೂ ಸತ್ಯ.

ಬಿಜೆಪಿ ಇಂದು ಭಾರತವನ್ನು ಗೆದ್ದಿರುವುದರ ಹಿಂದೆ ಅದರ ಆಪರೇಷನ್ ತಂತ್ರಗಾರಿಕೆ ಮುಖ್ಯ ಕೆಲಸ ಮಾಡಿದೆ. 2014 ರ ನಂತರ ಮೋದಿ ಶಾ ಯುಗ ಆರಂಭವಾದ ನಂತರ ಸಾಂವಿಧಾನಿಕ ಹುದ್ದೆಗಳನ್ನು ತಮಗೆ ಬೇಕಾದಂತೆ ಬಳಸಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಅನ್ನುವ ಆರೋಪ ಇದೆ. ಸಿಬಿಐ, ಇಡಿ ಯನ್ನು ತನ್ನ ಮರ್ಜಿಯಲ್ಲಿಟ್ಟುಕೊಂಡು ತಂತ್ರ ನಡೆಸುತ್ತಿದ್ದಾರೆ ಅನ್ನುವ ಆರೋಪ ಜೋರಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯತೀತ ಪಕ್ಷಗಳಲ್ಲಿ ಮಿಂಚಿರುವ ನಾಯಕರನ್ನು ಆಪರೇಷನ್ ಗೆ ಗುರಿಪಡಿಸಿ ಬಿಜೆಪಿ ತೆಕ್ಕೆಗೆ ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹಾಗೆ ಮೂಲ ಪಕ್ಷ ಬಿಟ್ಟು ಬಿಜೆಪಿ ಸೇರಿದ ಬಹುತೇಕ ನಾಯಕರು ಬಿಜೆಪಿಯವರಿಗಿಂತ ಹೆಚ್ಚಾಗಿ ಕಠೋರ ಹಿಂದುತ್ವವಾದಿಯಾಗುತ್ತಿದ್ದಾರೆ.

ಅಸ್ಸಾಂ ನಲ್ಲಿ ಈಗ ಬಿಜೆಪಿಯಿಂದ ಮಿಂಚುತ್ತಿರುವವರು ಹೀಮಂತ್ ಬಿಸ್ವಾಸ್ ಶರ್ಮಾ. ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇದೀಗ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಹೀಮಂತ್ ಬಿಸ್ವಾಸ್ ಶರ್ಮಾ ಮೂಲತಃ ಕಾಂಗ್ರೆಸ್ಸಿಗರು. ಕಾಂಗ್ರೆಸ್ ಮೂಲಕ ರಾಜಕಾರಣ ಆರಂಭಿಸಿದವರು. ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕತ್ವಕ್ಕೆ ಮನ್ನಣೆ ನೀಡುತ್ತಿಲ್ಲ. ಹಿರಿಯರಿಗೆ ಮಣೆ ಹಾಕಲಾಗುತ್ತಿದೆ ಎಂದು ಅಸಮಾಧಾನದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಅಷ್ಟೇನೂ ಹೋಲ್ಡ್ ಇರಲಿಲ್ಲ. ಹೀಮಂತ್ ಬಿಸ್ವಾಸ್ ಶರ್ಮಾ ತಮ್ಮ ವೈಯಕ್ತಿಕ ವರ್ಚಸ್ಸು, ಹಾರ್ಡ್ ಕೋರ್ ಹಿಂದುತ್ವ ಮುಖ್ಯವಾಹಿನಿಗೆ ತಂದು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಶಾನ್ಯದ ಹಲವು ರಾಜ್ಯಗಳಲ್ಲಿ ಈಗ ಹೀಮಂತ್ ಬಿಸ್ವಾಸ್ ಶರ್ಮಾ ಅವರದ್ದೇ ವರ್ಚಸ್ಸು ಕೆಲಸ ಮಾಡುತ್ತಿದೆ. ಅಸ್ಸಾಂ ನಲ್ಲಂತೂ ಹೀಮಂತ್ ನಾಯಕತ್ವದ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲೋದು ಬಿಡಿ, ಸ್ಪರ್ಧೆ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೀಮಂತ್ ಅವರ ಪ್ರಚೋದನಕಾರಿ ಹೇಳಿಕೆಗಳು, ಹಿಂದೂ ಮುಸ್ಲಿಂ ವಿಭಜನೆ ರಾಜಕಾರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ನಿಂದ ಎರವಲು ಪಡೆದ ನಾಯಕ ಈಗ ಬಿಜೆಪಿಯ ಅತ್ಯಂತ ನಂಬಿಕಸ್ಥ ಹಾರ್ಡ್ ಕೋರ್ ಹಿಂದುತ್ವ ನಾಯಕ.

ಇನ್ನು ಪಶ್ಚಿಮ ಬಂಗಾಳದಲ್ಲಿ ದೀದಿಯನ್ನು ಬೀದಿಗೆ ತಂದ ಸುವೇಂದು ಅಧಿಕಾರಿ ಕೂಡ ಮೂಲತಃ ಕಾಂಗ್ರೆಸ್ಸಿಗರು. ಅವರು ರಾಜಕಾರಣ ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷದಿಂದ. ಆ ನಂತರ ತೃಣಮೂಲ ಕಾಂಗ್ರೆಸ್ ಸೇರಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ಆಪ್ತ ವಲಯದ ನಾಯಕರಾದರು. ಅಲ್ಲಿಂದ ಬಿಜೆಪಿ ಸೇರಿದ ಸುವೇಂದು ಸೋಲೇ ಗೊತ್ತಿಲ್ಲದ ಮಮತಾ ದೀದಿಯನ್ನು ಎರಡೆರಡು ಬಾರಿ ಸೋಲಿಸಿ ಪಶ್ಚಿಮ ಬಂಗಾಳದ ಅಧಿಪತ್ಯ ತನ್ನ ತೆಕ್ಕೆಗೆ ತರುವಲ್ಲಿ ಯಶಸ್ವಿಯಾದರು. ಕೇಸರಿ ಶಾಲು ಮೂಲಕ ನೇರ ಫೀಲ್ಡ್ ಗಿಳಿಯುವ ಸುವೇಂದು ತನ್ನ ಉಗ್ರರೂಪಿ ಭಾಷಣದ ಮೂಲಕ ಕಟ್ಟರ್ ಹಿಂದುತ್ವ ನಾಯಕರಾಗಿದ್ದಾರೆ. ಬಿಹಾರದಲ್ಲಿ ಮುಖ್ಯಮಂತ್ರಿ ಆಗಿರುವ ಸಾಮ್ರಾಟ್ ಚೌಧರಿ ಕೂಡ ಹಿಂದುತ್ವದ ನಾಯಕರಾಗಿ ಮಿಂಚುತ್ತಿದ್ದಾರೆ.

ಇವಿಷ್ಟೇ ಅಲ್ಲ. ಇಂತಹ ಅನೇಕ ಉದಾಹರಣೆಗಳಿವೆ.‌ ಕರ್ನಾಟಕದಲ್ಲಿ ಜಾತ್ಯತೀತ ಲೇಬಲ್ ಅಡಿಯಲ್ಲಿ ಗೆದ್ದು ಬರುತ್ತಿದ್ದ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿದ ನಂತರ ಜೆಡಿಎಸ್ ನಾಯಕರಾಗಿರುವ ಕುಮಾರಸ್ವಾಮಿ ಬಿಜೆಪಿಯವರಿಗಿಂತ ಹೆಚ್ಚಾಗಿ ಕಮ್ಯುನಲ್ ಹೇಳಿಕೆ ನೀಡುತ್ತಿದ್ದಾರೆ. ಅವತ್ತಿನ ಕುಮಾರಸ್ವಾಮಿ ಇವರೇನಾ ಅನ್ನುವ ಕನ್ ಪ್ಯುಶನ್ ರಾಜ್ಯದ ಜನರದ್ದು. ಕರಾವಳಿಯಲ್ಲಿ ಮಂಗಳೂರು ಉತ್ತರದ ಶಾಸಕರಾಗಿರುವ ಭರತ್ ಶೆಟ್ಟಿ ರಾಜಕೀಯ ಪಯಣ ಆರಂಭಿಸಿದ್ದು ಜೆಡಿಎಸ್ ಪಕ್ಷದಿಂದ. ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಭರತ್ ಶೆಟ್ಟಿ ನಂತರ ಬಿಜೆಪಿ ಸೇರಿ ಈಗ ಕರಾವಳಿಯ ಹಿಂದುತ್ವ ಕೋಟೆಯ ಡಾರ್ಲಿಂಗ್ ಆಗಿದ್ದಾರೆ.

ಒಂದಂತೂ ದಿಟ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿದು ಅಲ್ಲಿನ ಸಿದ್ಧಾಂತ ಒಪ್ಪಿ ಅದನ್ನು ಅನುಷ್ಠಾನಕ್ಕೆ ತರಲು ಯತ್ನಿಸುವ ನಾಯಕರು ಬಹಳ ಅಪಾಯಕಾರಿ. ಈಗಿನ ಸನ್ನಿವೇಶ ನೋಡುವಾಗ ಮೂಲತಃ ಬಿಜೆಪಿಗರಿಗಿಂತ ಜಾತ್ಯತೀತ ಪಕ್ಷ ಬಿಟ್ಟು ಬಿಜೆಪಿಗೆ ಹಾರಿದ ನಾಯಕರು ಬಹಳ ಅಪಾಯಕಾರಿಯಾಗಿದ್ದಾರೆ.