ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ; ಮೇ 26 ರಂದು ಮಂಗಳೂರಿನಲ್ಲಿ ದುಂಡು ಮೇಜಿನ ಸಭೆ

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ, ಆರೋಗ್ಯ ಕ್ಷೇತ್ರದ ಖಾಸಗೀಕರಣದ ನೀತಿಯ ಕುರಿತು ಚರ್ಚಿಸಲು, ಮುಂದಿನ ಹೋರಾಟವನ್ನು ತೀರ್ಮಾನಿಸಲು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಮೇ 26 ರಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರು ನಗರದ ಸಹೋದಯ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ. ಸಭೆಯಲ್ಲಿ ಎಡಪಕ್ಷಗಳು, ರೈತ, ದಲಿತ, ಕಾರ್ಮಿಕ, ಯುವಜನ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಬರಹಗಾರರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಪ್ರಕಟನೆ ತಿಳಿಸಿದೆ.

ಇಂದು ಜಿಲ್ಲಾ ಪ್ರವಾಸದಲ್ಲಿದ್ದ ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗು ಸಭಾಪತಿ ಯು. ಟಿ. ಖಾದರ್ ಅವರು ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್‌ ಲಾಬಿಗಳಿಗೆ ಹಸ್ತಾಂತರಿಸುವುದನ್ನು ಸಮರ್ಥಿಸಿರುವುದು, ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಕೆಟ್ಟದಾಗಿ ಚಿತ್ರಿಸಲು ಯತ್ನಿಸಿರುವುದನ್ನು ಸಿಪಿಐಎಂ ಖಂಡಿಸಿದೆ. ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿಯಿಂದ ಸರಕಾರ ನುಚುಚಿಕೊಳ್ಳುವುದು, ಖಾಸಗಿ ಮೆಡಿಕಲ್ ಕಾಲೇಜು, ಕಾರ್ಪೊರೇಟ್ ಆರೋಗ್ಯ ಲಾಬಿಗಳ ಏಕಸ್ವಾಮ್ಯಕ್ಕೆ ಅವಕಾಶಕೊಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ಪ್ರತಿಗಾಮಿ ತೀರ್ಮಾನವನ್ನು ಸಮರ್ಥಿಸುವುದು ಜನದ್ರೋಹಿ ರಾಜಕಾರಣವಾಗಿ ಪರಿಗಣಿಸಲ್ಪಡುತ್ತದೆ. ಸದ್ಯ ಜಿಲ್ಲೆಯ ರಾಜಕಾರಣ ಖಾಸಗಿ ಮೆಡಿಕಲ್ ಕಾಲೇಜು ಲಾಬಿಗಳಿಗೆ ಪೂರ್ಣ ಶರಣಾಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.

ಈ ಹಿನ್ನಲೆಯಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ. ಸರಕಾರಿ ಆಸ್ಪತ್ರೆಗಳ ಬಲವರ್ಧನೆ, ಖಾಸಗಿ ಆರೋಗ್ಯ ಲಾಬಿಗಳ ನಿಯಂತ್ರಣ, ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಆದೇಶ ರದ್ದತಿಯ ಮೇಲೆ ಹೋರಾಟವನ್ನು ವಿಶಾಲ ನೆಲೆಯಲ್ಲಿ ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿಪಿಐಎಂ ಜಿಲ್ಲಾ ಸಮಿತಿ ತಿಳಿಸಿದೆ.