ಬೆಳ್ತಂಗಡಿ ಗುರುವಾಯನಕೆರೆ, ಅಲಾದಿಕೊಟ್ಟಿಗೆ ಎಂಬಲ್ಲಿ ನಡೆದಿದ್ದ ಹತ್ಯೆ ಪ್ರಕರಣವನ್ನು ಕೊನೆಗೂ ಬೆಳ್ತಂಗಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಯುವಕನನ್ನು ಬಂಟ್ವಾಳ ಗ್ರಾಮದ ಪೆರ್ನೆ ನಿವಾಸಿ ಯತೀಶ್ ಗೌಡ ಎಂದು ಗುರುತಿಸಲಾಗಿದೆ.
ಜೂನ್ 1 ರಂದು ಗುರುವಾಯನಕೆರೆ ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿದ ಮೃತನ ಸಹೋದರ ನಿತಿನ್ ಅವರು, ಮೃತ ವ್ಯಕ್ತಿಯು ತನ್ನ ಸಹೋದರ ಯತೀಶ (33) ಎಂದು ಗುರುತಿಸಿದ್ದಾರೆ .

ನಿತಿನ್ ಅವರು ಘಟನಾಸ್ಥಳಕ್ಕೆ ಬಂದು ಸ್ಥಳದಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಿದಾಗ, ದಿನಾಂಕ: 01-06-2026 ರಂದು ಬೆಳಿಗ್ಗಿನ ಸಮಯ ತನ್ನ ಸಹೋದರನಿಗೆ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54) ಎಂಬವರುಗಳು ಹಲ್ಲೆ ಮಾಡುತ್ತಿರುವುದು ಕಂಡುಬಂದಿದ್ದು, ಆರೋಪಿಗಳ ಹಲ್ಲೆಯಿಂದಾಗಿ ಯತೀಶನು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2) 103 ಜೊತೆಗೆ 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
