ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿದ್ದು, ಅಧಿಕಾರಕ್ಕೇರುವ ಜೋಷ್ ನಲ್ಲಿರುವ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಫೈಟ್ ಗರಿಗೆದರಿದೆ. ಕೆಲವೊಂದು ಕಡೆ ಒಂದೇ ಕ್ಷೇತ್ರದಲ್ಲಿ ಹತ್ತಕ್ಕಿಂತ ಅಧಿಕ ಆಕಾಂಕ್ಷಿಗಳಿದ್ದಾರೆ. ರಾಜ್ಯದ ವಿದ್ಯಮಾನಗಳ ಮಾಹಿತಿ ಪಡೆಯಲು ಹಾಗೂ ಕೆಲವೊಂದು ಟಿಕೆಟ್ ಟಫ್ ಆಗಿರುವ ಕ್ಷೇತ್ರಗಳಲ್ಲಿ ಯಾರಿಗೆ ನೀಡಿದರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಹೈಕಮಾಂಡ್ ಗುಪ್ತವಾಗಿ ಅಧಿಕಾರಿಯೊಬ್ಬರ ಮುಖಾಂತರ ಪಡೆಯುತ್ತಿದೆ. ಅವರು ಬೇರಾರೂ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್.
ಸಸಿಕಾಂತ್ ಸೆಂಥಿಲ್ ಮೂಲತಃ ತಮಿಳುನಾಡಿನವರಾಗಿದ್ದು, ರಾಯಚೂರು, ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿ ರದ್ದು ವಿರೋಧಿಸಿ ಐಎಎಸ್ ಹುದ್ದೆಯನ್ನು ತ್ಯಜಿಸಿದ್ದರು. ಇದಾದ ಬಳಿಕ ಕರ್ನಾಟಕದಲ್ಲಿ ನಡೆದಿದ್ದ ಹಲವು ಸಾಮಾಜಿಕ ಹೋರಾಟದಲ್ಲಿ ಭಾಗಿಯಾಗಿ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ನಂತರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

ಸಸಿಕಾಂತ್ ಸೆಂಥಿಲ್ ಹೈಕಮಾಂಡ್ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಕಾರಣವಾಗಿದ್ದು ಭಾರತ ಐಕ್ಯತಾ ಯಾತ್ರೆ. ಪ್ರತಿ ದಿನ ಬೆಳಿಗ್ಗೆ ಪಾದಯಾತ್ರೆ ಬಳಿಕ ನಾನಾ ಕ್ಷೇತ್ರಗಳ ಪ್ರಮುಖರ ಜತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದುದು ಇದೇ ಸೆಂಥಿಲ್. ರಾಹುಲ್ ಗಾಂಧಿ ಯವರೊಂದಿಗೆ ಅನ್ಯೋನ್ಯ ನಂಟಿಗೆ ಈ ಕಾರ್ಯಕ್ರಮ ಕಾರಣವಾಗಿತ್ತು.
ರಾಜ್ಯ ರಾಜಕಾರಣ, ಪಕ್ಷದ ಬೆಳವಣಿಗೆ, ಕೆಲವೊಂದು ಸೂಕ್ಷ್ಮ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಹೈಕಮಾಂಡ್ ಚರ್ಚಿಸಲು ನೆಚ್ಚಿಕೊಂಡ ವ್ಯಕ್ತಿಯಾಗಿದ್ದಾರೆ ಸಸಿಕಾಂತ್ ಸೆಂಥಿಲ್.